ಪಡುಬಿದ್ರೆ: ಬ್ಲೂ ಫ್ಲಾಗ್ ಬೀಚ್ ಅನಾವರಣ, ಪ್ರವಾಸೋದ್ಯಮ ಅಭಿವೃದ್ಧಿಗೆ ₹.1ಸಾವಿರ ಕೋಟಿ – ಶೋಭಾ ಕರಂದ್ಲಾಜೆ

ಪಡುಬಿದ್ರೆ: (ಉಡುಪಿ ಟೈಮ್ಸ್ ವರದಿ)ಬ್ಲೂ ಫ್ಲಾಗ್ ಬೀಚ್ ಗೆ ಮುಂದಿನ ದಿನಗಳಲ್ಲಿ ವಿದೇಶಗಳಿಂದ ದೊಡ್ಡ ಮಟ್ಟದ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಉಡುಪಿ‌ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಇಂದು ಪಡಿಬಿದ್ರೆಯ ಬ್ಲೂ ಫ್ಲಾಗ್ ಬೀಚ್ ನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತಿದ್ದು ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗೆ ದೇಶದ ಮೂಲೆ ಮೂಲೆಗಳಿಂದ, ವಿದೇಶಗಳಿಂದ ಹೆಚ್ಚು ಹೆಚ್ಚು ಪ್ರವಾಸಿಗರು ಇಲ್ಲಿ ಬ್ಲೂ ಫ್ಲಾಗ್ ಬೀಚ್ ವೀಕ್ಷಣೆಗೆ ಬರುವ ನಿರೀಕ್ಷೆ ಇದೆ. ಆದ್ದರಿಂದ ಇದರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ರಸ್ತೆಗಳನ್ನು ವಿಸ್ತಾರ ಮಾಡುವುದು, ಪಾರ್ಕಿಂಗ್ ವ್ಯವಸ್ಥೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಕಾಟೇಜ್ ಗಳ ನಿರ್ಮಾಣ ಮಾಡುವ ಯೋಜನೆಗಳು ಇವೆ. ಇದರ ಜೊತೆಗೆ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.

ಇನ್ನು ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದ ಅವರು, ಬಹಳ ದೊಡ್ಡ ಪ್ರಮಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಾಗಿದೆ. ಇದರೊಂದಿಗೆ ವಿಸ್ತಾರವಾದವ ರಿಟೆಂಕ್ಷನ್ ವಾಲ್ ವ್ಯವಸ್ಥೆ ಮಾಡಬೇಕಾಗಿದ್ದು ಇದಕ್ಕಾಗಿ ಸರಕಾರಕ್ಕೆ ರೂ.6 ಕೋಟಿಯ ಪ್ರಸ್ತಾವಣೆ ನೀಡಲಾಗಿದೆ. ಈ ಅನುದಾನವನ್ನು ಆದಷ್ಟು ಬೇಗ ಬಿಡುಗಡೆ ಮಾಡಿಸಿಕೊಂಡು ಈ ಬೀಚ್ ನ ‌ಅಭಿವೃದ್ಧಿಪಡಿಸಲಾಗುತ್ತದೆ. ಸಾಗರ್ ಮಾಲ ಯೋಜನೆಯ ಮೂಲಕ ಈ ಭಾಗದ ಅಭಿವೃದ್ಧಿಪಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇದರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಒಂದಾಗಿದ್ದು ಈ ಮೂಲಕ ಸರ್ಕಿಟ್ ಟೂರಿಸಮ್ ನ್ನು ನಿರ್ಮಾಣ ಮಾಡಲು 1000 ಕೋಟಿ ರೂಪಾಯಿ ಉಡುಪಿಯ ಭಾಗಕ್ಕೆ ನೀಡುತ್ತೇವೆಂದು ಬಂದರು ಸಚಿವರು ತಿಳಿಸಿದ್ದಾರೆ ಎಂದರು.

ಇದರೊಂದಿಗೆ ಹೆಜಮಾಡಿ  ಕೋಡಿ ಫಿಶಿಂಗ್ ಹಾರ್ಬರ್ ಅಭಿವೃದ್ದೀಗೆ ಕೇಂದ್ರದಿಂದ 100 ಕೋಟಿ ರೂ ನೀಡುವುದಾಗಿ ತೀರ್ಮಾನಿಸಲಾಗಿದೆ. ಅಲ್ಲದೆ  ಫ್ಲೋಟಿಂಗ್ ಜಟ್ಟಿ  ನಿರ್ಮಾಣ ಮಾಡಲು ಕೇಂದ್ರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ಲೈಟ್ ಹೌಸ್ ನ ಅಭಿವೃದ್ಧಿ ಹಾಗೂ ಲೈಟ್ ಹೌಸ್ ನಲ್ಲಿ ಲೈಟಿಂಗ್ ಮಾಡಲು ಅದನ್ನು ಪ್ರವಾಸೋದ್ಯಮವಾಗಿ ಬಳಸಲು ಸರಕಾರ ತೀರ್ಮಾನಿಸಿದೆ. ಇದರೊಂದಿಗೆ  ಪಡುಕೆರೆ ಮರೀನಾ ಬೀಚ್ ನ ಅಭಿವೃದ್ಧಿಗೆ ಈಗಾಗಲೇ ಕೇಂದ್ರ ಸರಕಾರದಲ್ಲಿ ಪ್ರಸ್ತಾವನೆ ಇದ್ದು, ಬಾರ್ಕೂರಲ್ಲಿ ವೈವಿಧ್ಯತೆಗಳನ್ನು ಸಾರುವ ಹೆರಿಟೇಜ್ ಸೆಂಟರ್ ನ್ನು ಆರಂಬಿಸಬೇಕು ಎನ್ನುವ ಯೋಜನೆ ಇದೆ ಎಂದು ತಿಳಿಸಿದರು.

ಈ ಸಂದರ್ಭದ ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್,ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,  ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ  ಸಹಾಯಕ ನಿರ್ದೇಶಕ ಸೋಮಶೇಖರ್ ಬಿ.ಕೆ, ಉಡುಪಿ ಜಿಲ್ಲಾ ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!