ಪ್ರಧಾನಿ ಮನ್ ಕಿ ಬಾತ್‌ನಲ್ಲಿ ಪ್ರಶಂಸೆ: ದಂಪತಿ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಭೇಟಿ
ಉಡುಪಿ: ನವದಂಪತಿ ಮಧುಚಂದ್ರಕ್ಕೆ ಹೋಗುವ ಬದಲು ತನ್ನೂರಿನ ಬೀಚ್ ಸ್ವಚ್ಚಗೊಳಿಸುವ ಮೂಲಕ ದೇಶದ ಪ್ರಧಾನಿ ಮೋದಿಯವರ ಮನ್ ಕಿ ಬಾತ್‌ನಲ್ಲಿ ಪ್ರಶಸಂಸೆಗೆ ಒಳಗಾದ ದಂಪತಿ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ ಮಾಡಿ ಶುಭ ಹಾರೈಸಿದರು.
ಕಳೆದ ತಿಂಗಳು ನವೆಂಬರ್ 18ರಂದು ಕುಂದಾಪುರದ ಬೈಂದೂರಿನ ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್ ಮದುವೆಯಾಗಿದ್ದರು. ಮದುವೆಯಾದ ನವದಂಪತಿ ಸಾಮಾನ್ಯವಾಗಿ ತಮ್ಮದೇ ಕನಸಿನ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಆದರೆ ಈ ದಂಪತಿ ಮಾಡಿದ ಕೆಲಸ ಸೋಮೇಶ್ವರ ಬೀಚ್‌ನ್ನು ಸ್ವಚ್ಛಗೊಳಿಸಿದ್ದು. ಅನುದೀಪ್‌ಗೆ ಹಿಂದಿನಿಂದಲೂ ತಮ್ಮ ಮನೆಯಿಂದ ೩ ಕಿಲೋ ಮೀಟರ್ ದೂರದಲ್ಲಿರುವ ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಛಗೊಳಿಸುವುದು ಅಭ್ಯಾಸ. ಅದಕ್ಕೀಗ ಅವರ ಪತ್ನಿ ಕೂಡ ಸಾಥ್ ನೀಡುತ್ತಿದ್ದಾರೆ. ಇಂದು ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು.
ಈ ಮಾಹಿತಿ ತಿಳಿಯುತ್ತಿದ್ದಂತೆ ಅಜ್ಜರಕಾಡುವಿನಲ್ಲಿರುವ ದಂಪತಿ ಮನೆಗೆ ನಳಿನ್ ಕುಮಾರ್ ಭೇಟಿ ನೀಡಿ ಅಭಿನಂಧಿಸಿದರು, ಈ ಸಂದರ್ಭ ಮಾತನಾಡಿದ ನಳಿನ್ ಇವರ ಸ್ವಚ್ಚತಾ ಕಾರ್ಯದ ಆಂದೋಲನ ಯುವ ಸಮುದಾಯಕ್ಕೆ ಮಾದರಿಯಾಗಲಿ ಎಂದರು.
ಈ ಬಗ್ಗೆ ಮಾತನಾಡಿದ ಅನುದೀಪ್ ನಾವು ಮಾಡಿದ ಈ ಸಣ್ಣ ಕೆಲಸವನ್ನು ದೇಶದ ಉನ್ನತ ಸ್ಥಾನದಲ್ಲಿರುವ ಪ್ರಧಾನಿಯವರು ಪ್ರಸಂಶಿರುವುದಕ್ಕೆ ನನಗೆ ಹೇಳಲು ಶಬ್ಧಗಳೇ ಸಿಗುತ್ತಿಲ್ಲ, ಈ ರೀತಿ ಅವರ ನಮ್ಮನ್ನು ಗುರುತಿಸಿದ್ದು ನಮಗೆ ನಮ್ಮ ಸಾಮಾಜಮುಖಿ ಕೆಲಸಕ್ಕೆ ಪ್ರೇರಣೆ ದೊರಕಿದಂತಾಗಿದೆ ಎಂದರು. ಇನ್ನು ಮುಂದೆ ಹಳ್ಳಿಗಳಿಗೆ ಹೋಗಿ, ಶಾಲಾ ಕಾಲೇಜ್ ಮಕ್ಕಳಿಗೆ ಸ್ವಚ್ಚ ಭಾರತ್ ಬಗ್ಗೆ ಮಾಹಿತಿ ನೀಡುವ ಬಗ್ಗೆಯೂ ಚಿಂತಿಸುವುದಾಗಿ ಅನುದೀಪ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಪ್ರಭಾರಿ ಕೆ.ಉದಯ್ ಕುಮಾರ್ ಶೆಟ್ಟಿ, ಮಟ್ಟಾರ್ ರತ್ನಕರ್ ಹೆಗ್ಡೆ, ಯಶ್‌ಪಾಲ್ ಸುವರ್ಣ, ಜಗದೀಶ ಅಧಿಕಾರಿ, ಶ್ರೀಕಾಂತ್ ನಾಯಕ್, ಅಂಡಾರು ದೇವಿಪ್ರಸಾದ್ ಶೆಟ್ಟಿ, ಶಿಲ್ಪಾ ಜಿ ಸುವರ್ಣ ಉಪಸ್ಥಿತರಿದ್ದರು.