ಕುಂದಾಪುರ ಮೂಲದ ನವದಂಪತಿಗಳನ್ನು ಮನ್ ಕಿ ಬಾತ್ ನಲ್ಲಿ ಮನಸಾರೆ ಹೊಗಳಿದ ಪ್ರಧಾನಿ ಮೋದಿ!
ಬೆಂಗಳೂರು: ಕುಂದಾಪುರದ ಬೈಂದೂರಿನ ನವದಂಪತಿಗಳನ್ನು ಇಂದು ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸಿದ್ದಾರೆ.
ಕಳೆದ ತಿಂಗಳು ನವೆಂಬರ್ 18ರಂದು ಕುಂದಾಪುರದ ಬೈಂದೂರಿನ ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್ ಮದುವೆಯಾಗಿದ್ದರು. ಮದುವೆಯಾದ ನವದಂಪತಿ ಹನಿಮೂನ್ ಹೋಗದೆ ತಮ್ಮದೇ ಊರಿನ ಬೀಚ್ ಸ್ವಚ್ಛತೆಗೊಳಿಸಿ ಸುದ್ಧಿಯಾಗಿದ್ದರು.
ಅನುದೀಪ್ ಗೆ ಹಿಂದಿನಿಂದಲೂ ತಮ್ಮ ಮನೆಯಿಂದ 3 ಕಿಲೋ ಮೀಟರ್ ದೂರದಲ್ಲಿರುವ ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಛಗೊಳಿಸುವುದು ಅಭ್ಯಾಸ. ಅದಕ್ಕೀಗ ಅವರ ಪತ್ನಿ ಕೂಡ ಸಾಥ್ ನೀಡುತ್ತಿದ್ದಾರೆ.
ಲಕ್ಷದ್ವೀಪ ಅಥವಾ ಹಿಮಾಚಲ ಪ್ರದೇಶಕ್ಕೆ ಹೋಗಿ ಅಲ್ಲಿ ಸ್ವಚ್ಛ ಮಾಡಬೇಕೆಂದು ಅಂದುಕೊಂಡಿದ್ದರು ಇವರು, ಆದರೆ ಕೊರೋನಾದಿಂದಾಗಿ ಹೋಗದೆ ತಮ್ಮ ಮನೆ ಹತ್ತಿರವೇ ಸ್ವಚ್ಛ ಮಾಡಿದ್ದಾರೆ. ಸಮುದ್ರ ತೀರದಲ್ಲಿ ಚಪ್ಪಲ್ ಗಳು, ಆಲ್ಕೋಹಾಲ್ ಬಾಟಲ್ ಗಳು, ವೈದ್ಯಕೀಯ ಬಾಟಲ್ ಗಳು, ಕಸಗಳು, ಪ್ಲಾಸ್ಟಿಕ್ ಗಳು ಬಿದ್ದುಕೊಂಡಿರುತ್ತವೆ. ಅವುಗಳನ್ನೆಲ್ಲಾ ಸ್ವಚ್ಛಗೊಳಿಸಿದ್ದೇವೆ ಎನ್ನುತ್ತಾರೆ ಅನುದೀಪ್.
31 ವರ್ಷದ ಅನುದೀಪ್ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ನವೆಂಬರ್ 27ರಿಂದ ಡಿಸೆಂಬರ್ 5ರವರೆಗೆ ಇವರು ಸುಮಾರು 600 ಕಿಲೋ ತ್ಯಾಜ್ಯಗಳನ್ನು ಈ ದಂಪತಿ ಸೋಮೇಶ್ವರ ಬೀಚ್ ತೀರದಿಂದ ಹೊರತೆಗೆದಿದ್ದಾರಂತೆ. ಇವರ ಕೆಲಸ ಹಲವರ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಪ್ರಧಾನಿಯೇ ಗುರುತಿಸಿ ಮನ್ ಕಿ ಬಾತ್ ನಲ್ಲಿ ಇಂದಿನ ಯುವ ಪೀಳಿಗೆಗೆ ದಂಪತಿ ದಾರಿದೀಪ ಎಂದಿದ್ದಾರೆ.