ದೇಶದಕ್ಕಾಗಿ ನಾವು ಹೊಸ ವರ್ಷದಲ್ಲಿ ಹೊಸ ನಿರ್ಣಯ ಕೈಗೊಳ್ಳೋಣ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ನವದೆಹಲಿ: ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಎಲ್ಲೆಲ್ಲೂ ಬೇಡಿಕೆಗಳು ಹೆಚ್ಚಾಗುತ್ತಿದ್ದು, ಸ್ವದೇಶಿ ವಸ್ತುಗಳ ಬಳಗೆ ಬಗ್ಗೆ ಜಾಗೃತಿ ಕೂಡ ಹೆಚ್ಚಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಸಕ್ತ ಸಾಲಿನ ಕೊನೆಯ ಮನ್ ಕಿ ಬಾತ್ ನಲ್ಲಿ ಭಾನುವಾರ ಹೇಳಿದ್ದಾರೆ.
ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಕೋವಿಡ್ ನಡುವೆಯೇ ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡಿ ಎಂಬ ಕೂಗು ಹೆಚ್ಚಾಗುತ್ತಿದೆ. ದೇಶದಲ್ಲೇ ಎಲ್ಲಾ ಅಗತ್ಯ ವಸ್ತುಗಳನ್ನು ತಯಾರಿಸುತ್ತಿದ್ದೇವೆ. ದೇಶದಲ್ಲಿ ತಯಾರಿಸುವ ವಸ್ತುಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವುದು ಬೇಡ ಎಂದು ಹೇಳಿದ್ದಾರೆ
ಅದೇ ವೇಳೆ ಜಾಗತಿಕ ಮಟ್ಟದ ಉತ್ಪನ್ನಗಳನ್ನು ತಯಾರಿಸಲು ದೇಶದ ಎಲ್ಲಾ ಕೈಗಾರಿಕೋದ್ಯಮಿಗಳಲ್ಲಿ ಅವರು ಮನವಿ ಮಾಡಿದರು. ದೇಶದಲ್ಲಿ ಈಗ ಆತ್ಮನಿರ್ಭರತೆಯೆಂಬ ಹೊಸ ಸಾಮರ್ಥ್ಯ ಹುಟ್ಟಿಕೊಂಡಿದೆ. ನಮ್ಮಲ್ಲಿ ತಯಾರಿಸಲ್ಪಟ್ಟ ಆಟಿಕೆಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ದೇಶೀಯ ವಸ್ತುಗಳ ಮೇಲೆ ಜನರ ಆಕರ್ಷಣೆ ಹೆಚ್ಚುತ್ತಿದೆ. ಝೀರೋ ಇಫೆಕ್ಟ್- ಝೀರೋ ಡಿಫೆಕ್ಟ್ ಯೋಚನೆಯಿಂದ ಕೆಲಸ ಮಾಡುವ ಸಮಯ ಇದಾಗಿದ್ದು, ದೇಶದಲ್ಲಿ ಉತ್ಪಾದಿತ ವಸ್ತುಗಳ ಬಳಕೆಯ ಸಂಕಲ್ಪ ಮಾಡಲು ಕರೆ ನೀಡಿದರು. ದೇಶದಲ್ಲಿ ಸ್ಟಾರ್ಟ್ ಅಪ್ಗಳು ಹೆಚ್ಚು ಹುಟ್ಟಬೇಕು. ಹೊಸ ಯೋಚನೆಗಳು ಅನುಷ್ಠಾನಕ್ಕೆ ಬರಬೇಕು ಎಂದು ವಿವರಿಸಿದರು.
ಅತಿ ಕಡಿಮೆ ಅವಧಿಯಲ್ಲಿ ಜನರ ಆಲೋಚನಾ ಶಕ್ತಿ ಎಷ್ಟು ಬದಲಾಗಿದೆ ನೀವು ಒಂದು ಪಟ್ಟಿ ಮಾಡಿ ಎಂದು ಜನರಲ್ಲಿ ನಾನು ಮನವಿ ಮಾಡುವೆ. ಈ ಪಟ್ಟಿಯಲ್ಲಿ ನಾವು ಎಷ್ಟು ವಿದೇಶಿ ವಸ್ತುಗಳನ್ನು ಬಳಕೆ ಮಾಡುತ್ತೇವೆ ಎಂಬುದನ್ನು ತಿಳಿಯಿರಿ. ದೇಶದಕ್ಕಾಗಿ ನಾವು ಹೊಸ ವರ್ಷದಲ್ಲಿ ಹೊಸ ನಿರ್ಣಯ ಕೈಗೊಳ್ಳೋಣ ಎಂದು ಹೇಳಿದ್ದಾರೆ.
ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡುತ್ತೇವೆ ಎಂದು ಹೊಸ ವರ್ಷದಲ್ಲಿ ಸಂಕಲ್ಪ ಮಾಡಿ. ಸ್ವದೇಶಿ ವಸ್ತುಗಳಲ್ಲಿ ನಮ್ಮ ದೇಶದ ಜನರ ಬೆವರಿನ ಶ್ರಮ ಅಡಗಿದೆ. ನಿಮ್ಮ ಸಂಕಲ್ಪ ನಮ್ಮ ದೇಶದ ಜನರಿಗೆ ಸಹಾಯಕವಾಗಲಿದೆ ಎಂದರು.
ಭಾರತದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಜಿಮ್ ಕಾರ್ಬೆಟ್ ಚಿರತೆಗಳ ಬಗ್ಗೆ ಹೇಳಿದ್ದರು. ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.
ಇದೇ ವೇಖೆ ಕರ್ನಾಟಕದಿಂದ ಬಂದಿರುವ ಪತ್ರವನ್ನು ಓದಿದ ಅವರು, ಶ್ರೀರಂಗಪಟ್ಟಣದ ಸಮೀಪದ ಮಂದಿರವನ್ನು ಯುವ ಬ್ರಿಗೇಡ್ ಸ್ವಚ್ಛಗೊಳಿಸಿದ ಕಾರ್ಯವನ್ನು ಶ್ಲಾಘಿಸಿದರು. ವಾರಾಂತ್ಯದ ಬಿಡುವಿನ ಸಮಯದಲ್ಲಿ ಇದನ್ನು ಅವರು ಮಾಡಿದ್ದಾರೆಂದು ತಿಳಿಸಿದರು.
ಭಾರತದಲ್ಲಿನ ಯುವಕರನ್ನು ನೋಡಿದಾಗ ನನಗೆ ಆನಂದ ಆಗುತ್ತದೆ. ಕ್ಯಾನ್ ಡು, ವಿಲ್ ಡು ಎಂಬ ಎರಡು ಬಲವಾದ ನಂಬಿಕೆಗಳಿವೆ. ಅವರು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾರೆ.
ಕೋವಿಡ್ ಸಂದರ್ಭದಲ್ಲಿ ನಾವು ಶಿಕ್ಷಕರ ತ್ಯಾಗಗಳ ಬಗ್ಗೆ ಮಾತನಾಡಬೇಕು. ಅವರು ಮಕ್ಕಳಿಗೆ ಪಾಠಗಳನ್ನು ಅರ್ಥ ಮಾಡಿಸಲು ವಿವಿಧ ಪ್ರಯತ್ನಗಳನ್ನು ಮಾಡಿದ್ದಾರೆ. ವಿವಿಧ ರೀತಿಯಲ್ಲಿ ಪಠ್ಯಗಳನ್ನು ಅರ್ಥ ಮಾಡಿಸಲು ಪ್ರಯೋಗಗಳನ್ನು ಮಾಡಿದ್ದಾರೆ ಎಂದಿದ್ದಾರೆ.
ಕಾಶ್ಮೀರದ ಸೇಬು, ಕೇಸರಿಗೆ ಜಿಐ ಟ್ಯಾಗ್ ದೊರಕಿ ವಿಶ್ವದಾದ್ಯಂತ ಪ್ರಚಾರ ಪಡೆಯಲು ಸಹಾಯವಾಯಿತು. ಜಮ್ಮು ಕಾಶ್ಮೀರದ ಸಮೃದ್ಧ ಸಂಸ್ಕೃತಿ ವಿಶ್ವಕ್ಕೇ ಮಾದರಿಯಾಯಿತು. ಜಿಐ ಟ್ಯಾಗ್ ದೊರಕಿದ ನಂತರ ದುಬೈನ ಸೂಪರ್ ಮಾರ್ಕೆಟ್ ಒಂದು ಕೇಸರಿಯನ್ನು ಆಮದು ಮಾಡಿಕೊಳ್ಳತೊಡಗಿತು. ಕಾಶ್ಮೀರದ ಜನರು ತಾವು ಬೆಳೆಯುವ ಕೇಸರಿಯ ಕುರಿತು ಗರ್ವ ಪಡೆಯುವಂತಾಯಿತು ಎಂದು ತಿಳಿಸಿದ್ದಾರೆ.