ಪಂಜಾಬ್: ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ, ಬಿಜೆಪಿ ಕಚೇರಿ ಮೇಲೆ ದಾಳಿ

ಚಂಡೀಗಢ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಬಗ್ಗೆ ಪ್ರತಿಭಟನೆ ತೀವ್ರವಾಗಿರುವುದರ ಮಧ್ಯೆ, ರೈತರು ಇತ್ತೀಚೆಗೆ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದೆ. ನಿನ್ನೆ ಶುಕ್ರವಾರ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಪಂಜಾಬ್ ರಾಜ್ಯದ ಬಟಿಂಡಾದಲ್ಲಿ ರೈತರು ಬಿಜೆಪಿ ಕಚೇರಿ ಮೇಲೆ ಗುರಿಯಾಗಿಟ್ಟು ದಾಳಿ ಮಾಡಿದ್ದಾರೆ. ನಿನ್ನೆ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಪ್ರತಿಭಟನಾ ನಿರತ ರೈತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿ ಕುರ್ಚಿಗಳನ್ನು ಮುರಿದು ಹಾಕಿ ಎಲ್ ಇಡಿ ಟಿವಿಯನ್ನು ಒಡೆದು ಹಾಕಿ ಕಲ್ಲು ತೂರಾಟ ನಡೆಸಿದ್ದಾರೆ.

ಬಟಿಂಡ ಬಿಜೆಪಿ ಮುಖ್ಯಸ್ಥ ವಿನೋದ್ ಗುಪ್ತ ಮತ್ತು ರಾಜ್ಯ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕ ರವೀಂದರ್ ಗುಪ್ತ ಸೇರಿದಂತೆ ಐವರು ಪಕ್ಷದ ಕಾರ್ಯಕರ್ತರು ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಈ ಎಲ್ಲಾ ಘಟನಾವಳಿಗಳು ಸಿಸಿಟಿವಿ ವಿಡಿಯೊದಲ್ಲಿ ಸೆರೆಯಾಗಿದ್ದು ರೈತರು ಹಿಂಸಾಕೃತ್ಯ ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಭೀತಿಯಿಂದ ದಿಕ್ಕುಪಾಲಾಗಿ ಓಡುತ್ತಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಿದರು.

ಆದರೆ ನಿನ್ನೆ ದಾಂಧಲೆ ಮಾಡಿದವರು ರೈತರಲ್ಲಿ, ಕೆಲವು ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗಿರುವವರು ಎಂದು ಕೆಲವು ರೈತರು ಹೇಳುತ್ತಿದ್ದಾರೆ.

ಪಂಜಾಬ್ ನ ಜಲಂದರ್ ಕಂಟೋನ್ಮೆಂಟ್ ನಲ್ಲಿ ಸಹ, ಬಿಜೆಪಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ರೈತರು ಹೋಗಿ ದಾಂಧಲೆ ನಡೆಸಿದ್ದಾರೆ. ನಂತರ ಬಿಜೆಪಿ ನಾಯಕ ಮನೋರಂಜನ್ ಕಳಿಯಾ ಅವರ ನಿವಾಸದ ಮೇಲೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಿದರು. ಈ ವೇಳೆ ಕೆಲವು ರೈತರಿಗೆ ಗಾಯಗಳಾಗಿವೆ.

ಕಳೆದ ನಾಲ್ಕೈದು ದಿನಗಳಿಂದ ಪಂಜಾಬ್ ನಲ್ಲಿ ಖಾಸಗಿ ಟೆಲಿಕಾಂ ಕಂಪೆನಿಗಳ ಮೊಬೈಲ್ ಟವರ್ ಗಳ ಮೇಲೆ ರೈತರು ಗುರಿಯಾಗಿರಿಸಿಕೊಂಡು ದಾಳಿ ಮಾಡಿದ್ದಾರೆ. ಈ ಟವರ್ ಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಸುಮಾರು ಸಾವಿರ ಟವರ್ ಗಳನ್ನು ಹಾನಿ ಮಾಡಲಾಗಿದೆ. 

ಸಾರ್ವಜನಿಕ ತೊಂದರೆ ಮಾಡದಂತೆ ಮತ್ತು ಶಾಂತಿಯುತವಾಗಿ ಪ್ರತಿಭಟನೆ ಸಾಗಿಸುವಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಭಟನಾ ನಿರತ ರೈತರಿಗೆ ಮನವಿ ಮಾಡಿದ್ದಾರೆ. 

ಉತ್ತರಾಖಂಡ್ ನಲ್ಲಿ ರೈತರು ಪೊಲೀಸರೊಂದಿಗೆ ಚಕಮಕಿ ನಡೆಸಿದ ಘಟನೆ ವರದಿಯಾಗಿದೆ.ದೆಹಲಿಗೆ ಹೊರಟಿದ್ದ ರೈತರನ್ನು ತಡೆದ ಪೊಲೀಸರೊಂದಿಗೆ ಉದಮ್ ಸಿಂಗ್ ನಗರ್ ನಲ್ಲಿ ರೈತರು ಮಾತಿನ ಚಕಮಕಿ ನಡೆಸಿದ್ದಾರೆ.

ವೈರಲ್ ಆದ ವಿಡಿಯೊವೊಂದರಲ್ಲಿ ಟ್ರಾಕ್ಟರ್ ಒಂದರಲ್ಲಿ ಪೊಲೀಸ್ ಬ್ಯಾರಿಕೇಡ್ ನ್ನು ತಳ್ಳುವ ದೃಶ್ಯವಿದೆ. ನಮ್ಮ ಹಕ್ಕುಗಳನ್ನು ಪೊಲೀಸರು ಕಸಿಯಲು ಸಾಧ್ಯವಿಲ್ಲ. ನಾವು ದೆಹಲಿಗೆ ಶಾಂತಿಯುತವಾಗಿ ಮೆರವಣಿಗೆ ಹೊರಟಿದ್ದು ಪೊಲೀಸರು ನಮ್ಮನ್ನು ತಡೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!