ಸಾರ್ವಜನಿಕ ದೇವಸ್ಥಾನವಾಗಿಯೇ ಉಳಿಯಲಿರುವ ಅಂಬಲಪಾಡಿ ದೇವಸ್ಥಾನ
ಉಡುಪಿ: ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನವನ್ನು ತನ್ನ ವಶಕ್ಕೆ ನೀಡಬೇಕೆಂದು ಕೋರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ನೀ. ಬೀ. ವಿಜಯ ಬಲ್ಲಾಳರು 2014ರಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯವು ವಿಚಾರಣೆ ನಡೆಸಿ ಡಿಸೆಂಬರ್ 23ರಂದು ತಿರಸ್ಕರಿಸಿದೆ. ಅಂಬಲಪಾಡಿ ಶ್ರೀಮಹಾಕಾಳಿ ಮತ್ತು ಜನಾರ್ದನ ದೇವರು ತನ್ನ ಮನೆ ದೇವರಾಗಿದೆ. ಆದುದರಿಂದ ದೇವಸ್ಥಾನವನ್ನು ತನಗೆ ಹಸ್ತಾಂತರಿಸಬೇಕು ಎಂಬುದು ವಿಜಯ ಬಲ್ಲಾಳರ ಮೇಲ್ಮನವಿಯಾಗಿತ್ತು. ವಿಜಯ ಬಲ್ಲಾಳರು 2003ರಲ್ಲಿ ಇದೇ ಕೋರಿಕೆಯ ಅರ್ಜಿಯನ್ನು ಉಡುಪಿಯ ಸಿವಿಲ್ನ್ಯಾಯಾಲಯದಲ್ಲಿ ಸಲ್ಲಿಸಿದ್ದು, 2013ರಲ್ಲಿ ಸಿವಿಲ್ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು. ಕೆಳ ಹಂತದ ನ್ಯಾಯಾಯಲವು ತನ್ನ ಕೋರಿಕೆಯನ್ನು ತಿರಸ್ಕರಿಸಿದ ಕಾರಣ, ವಿಜಯ ಬಲ್ಲಾಳರು ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನವು ಹಿಂದಿನಿಂದಲೂ ಸಾರ್ವಜನಿಕ ದೇವಸ್ಥಾನವಾಗಿದೆ. ಶ್ರೀ ಮಹಾಕಾಳಿಗೆ ಹಿಂದಿನ ಕಾಲದಲ್ಲಿ ಜಾತಿ , ಮತ ಭೇದವಿಲ್ಲದೆ ಎಲ್ಲರೂ ನೇರವಾಗಿ ಪೂಜೆ ಮಾಡಿ ಕೃತಾರ್ಥರಾಗುತ್ತಿದ್ದರು ಎಂಬ ಉಲ್ಲೇಖವಿದೆ. ಏಳು ಕೋಟಿ ರೂಪಾಯಿಗಳಿಗೂ ಅಧಿಕ ವಾರ್ಷಿಕ ಆದಾಯವಿರುವ ಸಾರ್ವಜನಿಕ ದೇವಸ್ಥಾನವು ಸಾರ್ವಜನಿಕ ದೇವಸ್ಥಾನವಾಗಿಯೇ ಉಳಿಯಬೇಕು ಮತ್ತು ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂಬುದು ಸರಕಾರದ ಮುಂದೆ ಭಗವದ್ಬಕ್ತರೆಲ್ಲರ ಮನವಿಯಾಗಿದೆ. ಬಲ್ಲಾಳರ ಮೇಲ್ಮನವಿಯನ್ನು ಜಿಲ್ಲಾ ನ್ಯಾಯಾಲಯವು ತಿರಸ್ಕರಿಸಿರುವುದನ್ನು ಸ್ವಾಗತಿಸಿರುವ ಭಗವದ್ಭಕ್ತರು, ಸಂಭ್ರಮ ವ್ಯಕ್ತಪಡಿಸಿದ್ದಾರೆ. |