ಪಡುಬಿದ್ರೆ: ಅಂತರಾಷ್ಟ್ರೀಯ ಮನ್ನಣೆಯ ‘ಬ್ಲೂ ಫ್ಲಾಗ್’ ಬೀಚ್ ಡಿ.28 ರಂದು ಅನಾವರಣ

ಪಡುಬಿದ್ರೆ: (ಉಮೇಶ್ ಮಾರ್ಪಳ್ಳಿ, ಉಡುಪಿ ಟೈಮ್ಸ್ ವರದಿ)ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಸರ್ಟಿಫಿಕೇಶನ್ ನ ಮಾನ್ಯತೆ ಪಡೆದಿರುವ ಪಡುಬಿದ್ರೆ ಬ್ಲೂ ಫ್ಲಾಗ್ ಬೀಚ್ ಡಿ. 28 ರಂದು ಉದ್ಘಾಟನೆಗೊಳ್ಳಲಿದೆ. 

ಈಗಾಗಲೇ ಪ್ರವಾಸಿಗರ ಆಗಮನಕ್ಕೆ ಬೀಚ್ ತೆರೆದುಕೊಂಡಿದ್ದು, ಪ್ರವಾಸಿಗರನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸುತ್ತಿದೆ. 

ಮಿನಿಸ್ಟ್ರಿ ಆಫ್ ಎನ್ವಿರಾನ್ಮೆಂಟ್, ಫಾರೆಸ್ಟ್ ಆಂಡ್ ಕ್ಲೈಮೇಟ್‌ ಚೇಂಜ್‌, ಸೊಸೈಟಿ ಫಾರ್ ಇಂಟಿಗ್ರೇಟೆಡ್ ಕೋಸ್ಟಲ್ ಮ್ಯಾನೆಜ್‌ಮೆಂಟ್‌ ಇದರ ಸಹಯೋಗದೊಂದಿಗೆ ಉಡುಪಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಉಸ್ತುವಾರಿಯಲ್ಲಿ  ಈ ಬ್ಲೂ ಫ್ಲಾಗ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಲಾಗಿದೆ.

ಈ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆಗೆ  ದೇಶದ 13 ಬೀಚ್  ಅಭಿವೃದ್ಧಿಪಡಿಸಲಾಗಿತ್ತು. ಈ ಪೈಕಿ ಎಲ್ಲಾ ಅಗತ್ಯ ನಿಯಮಗಳ ಪಾಲನೆ ಮತ್ತು ಗುಣಮಟ್ಟ ಹೊಂದಿರುವ 8 ಬೀಚ್ ಗಳನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಿ ಅಂತರರಾಷ್ಟ್ರೀಯ ಜ್ಯೂರಿಗೆ ಕಳುಹಿಸಲಾಗಿತ್ತು. ಇಲ್ಲಿ ಆಯ್ಕೆಯಾದ 8 ಬೀಚ್ ಗಳಲ್ಲಿ ಪಡುಬಿದ್ರೆ ಬ್ಲೂ ಫ್ಲಾಗ್ ಬೀಚ್ ಸಹ ಸೇರಿದೆ ಎಂಬುದು ಜಿಲ್ಲೆಯ ಜನತೆಗೆ ಹೆಮ್ಮೆಯ ವಿಚಾರ. ಉಡುಪಿ ಜಿಲ್ಲೆಯ ಹೆಮ್ಮೆಯ ಪಡುಬಿದ್ರೆ ಬ್ಲೂ ಫ್ಲಾಗ್ ಬೀಚ್ ನಲ್ಲಿ 33 ಮಾನದಂಡಗಳನ್ನು ಆಧರಿಸಿ ಬ್ಲೂ ಫ್ಲಾಗ್  ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ.

ಇಲ್ಲಿ ಪ್ರವಾಸಿಗರಿಗೆ ಅನುಕೂಲಕರ ವಾಗುವಂತೆ ಎಲ್ಲಾ ವ್ಯವಸ್ಥೆಯನ್ನು  ಮಾಡಲಾಗಿದೆ. ಬೀಚ್ ನ 100 ಮೀ. ಏರಿಯಾವನ್ನು ಸರ್ವೆ ಮಾಡಿ ಸೇಫ್ ಝೋನ್ ಆಗಿ ಪರಿಗಣಿಸಿ ಈ ಝೋನ್ ವ್ಯಾಪ್ತಿಯಲ್ಲಿ ನೆಟ್ ಗಳನ್ನು ಹಾಕಲಾಗುತ್ತದೆ. ಈ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಾಸಿಗರು ನೀರಿಗಿಳಿದು ಆಟವಾಡಬಹುದಾಗಿದೆ. ಆದರೆ ಈ ವ್ಯಾಪ್ತಿಯಲ್ಲಿ ಅಳವಡಿಸಿರುವ ನೆಟ್ ನ್ನು ಯಾವುದೇ ಕಾರಣಕ್ಕೂ ಕ್ರಾಸ್ ಮಾಡುವಂತಿಲ್ಲ. ಅಲ್ಲದೆ,  ಈ ಸೇಫ್ ಝೋನ್ ಹೊರತು ಪಡಿಸಿ ಉಳಿದ ಯಾವುದೇ ಕಡೆಗಳಲ್ಲಿ ಪ್ರವಾಸಿಗರು ನೀರಿಗೆ ಇಳಿಯುವಂತಿಲ್ಲ. 

ಬೀಚ್ ನಲ್ಲಿ ವಿಕಲ ಚೇತನರು ನೀರಿನಲ್ಲಿ ಆಡ ಬಯಸಿದ್ದಲ್ಲಿ ಅವರಿಗಾಗಿಯೂ ವಿಶೇಷ ವ್ಯವಸ್ಥೆ ಇದೆ. ಇವರಿಗಾಗಿಯೇ ಮಾಡಿದ ವಿಶೇಷ ಚೇರ್ ನಲ್ಲಿ ಲೈಫ್ ಗಾರ್ಡ್ ಗಳು ಕರೆದುಕೊಂಡು ಹೋಗಿ ನೀರಿನಲ್ಲಿ ಆಟವಾಡಲು ಅನುವು ಮಾಡಿಕೊಡುತ್ತಾರೆ. ಇದರೊಂದಿಗೆ ಇಲ್ಲಿ ವಿಕಲ ಚೇತನರಿಗಾಗಿ ಬಳಸಲು ಅನುಕೂಲಕರವಾದಂತ ವಿಶೇಷ ಶೌಚಾಲಯ ದ ವ್ಯವಸ್ಥೆ ಯನ್ನೂ ಮಾಡಲಾಗಿದೆ. ಇಲ್ಲಿ ಮಕ್ಕಳಿಗಾಗಿ ವಿಶೇಷ ಕಿಡ್ಸ್ ಝೋನ್ ಇದ್ದು, ಹಿರಿಯರಿಗಾಗಿ ಔಟ್ ಡೋರ್ ಫಿಟ್ನೆಸ್ ವ್ಯವಸ್ಥೆ ಯೂ ಇದೆ.

ಇನ್ನು ಈ ಬೀಚ್ ನಲ್ಲಿ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಬೀಚ್ ಕ್ಲೀನ್ ಮೂಲಕ ಶೇಖರಣೆಯಾದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಎಸ್ ಎಲ್ ಆರ್ ಎಂ ಘಟಕ ಇದ್ದು ಇದರ ಮೂಲಕ ತ್ಯಾಜ್ಯ ವಿಲೇವಾರಿ ಮಾಡಿ ಪಂಚಾಯತ್ ಗೆ ವರ್ಗಾಯಿಸಲಾಗುತ್ತದೆ.  ಇದರೊಂದಿಗೆ ವಿಶಾಲವಾದ ಗಾರ್ಡನ್, ಸಿಟೌಟ್ ಅಂಬ್ರಲ್ಲಾ, ಮರದ ಜೋಕಾಲಿಗಳು, ಶುದ್ಧ ಕುಡಿಯುವ ನೀರಿನ ಘಟಕ, ಪ್ರವಾಸಿಗರಿಗಾಗಿ ವ್ಯವಸ್ಥಿತವಾದ ಶೌಚಾಲಯಗಳು, ಡ್ರೆಸ್ಸಿಂಗ್ ರೂಮ್ ಗಳ ಸೌಲಭ್ಯನೂ ಇದೆ. ಬೀಚ್ ಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಹಾಗೂ,ಮುಂಜಾಗೃತಾ ಕ್ರಮವಾಗಿ ಎಲ್ಲೆಡೆ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!