ಉಡುಪಿ: ಅತ್ಯಾಕರ್ಷಕ ಉಡುಗೊರೆಗಳೊಂದಿಗೆ ಹೆಲಿಕಾಪ್ಟರ್ ಇಳಿದ ಸಾಂತ ಕ್ಲಾಸ್!
ಉಡುಪಿ: ಕ್ರಿಸ್ಮಸ್ ಅಂದ್ರೆ ಅಲ್ಲಿ ಕ್ರಿಸ್ ಮಸ್ ಅಜ್ಜ ಇದ್ದೇ ಇರುತ್ತಾರೆ. ಇದೇ ಕ್ರಿಸ್ ಅಜ್ಜ ಎಂದು ಪ್ರಸಿದ್ದಿ ಪಡೆದಿರುವ ಸಾಂತ ಕ್ಲಾಸ್ ಇದೀಗ ಉಡುಪಿಗೆ ಆಗಮಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಉಡುಪಿಯ ಕಲ್ಯಾಣಪುರಕ್ಕೆ ಬಂದಿಳಿದಿರುವ ಸಾಂತ ಕ್ಲಾಸ್ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಶುಭಾಶಯ ತಿಳಿಸಲು ಬಂದಿರುವ ಸಾಂತ ಕ್ಲಾಸ್ ಸಾಮಾಜಿಕ ಜಾಲ ತಾಣ ದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಹೌದು ಪ್ರತಿ ವರ್ಷ ಕ್ರಿಸ್ ಮಸ್ ದಿನದಂದು ತನ್ನ ಸೃಜನಶೀಲತೆ ಮತ್ತು ಕೈಚಳಕದಿಂದ ವಿವಿಧ ಶೈಲಿಯಲ್ಲಿ ಸಾಂತ ಕ್ಲಾಸ್ ಆಗಮನವನ್ನು ಬಿಂಬಿಸುವುದು ಉಡುಪಿ ತಾಲೂಕಿನ ಕಲ್ಯಾಣಪುರದ ಓವನ್ ರಾಡ್ರಿಗಸ್ ಅವರ ವಿಶೇಷತೆ ಅದರಂತೆ ಈ ಭಾರಿ ಕ್ರಿಸ್ಮಸ್ ಗೆ ಅವರ ಪರಿಶ್ರಮದಲ್ಲಿ ರಚಿತಗೊಂಡಿರುವ ಸಾಂತ ಕ್ಲಾಸ್ ಹೆಲಿಕಾಪ್ಟರ್ ನಿಂದ ಇಳಿದು ಬರುತ್ತಿರುವ ದ್ರಶ್ಯವನ್ನು ಅತ್ಯಾಕರ್ಷಕ ರೀತಿಯಲ್ಲಿ ಬಿಂಬಿಸಲಾಗಿದೆ. ಕಳೆದ 45 ದಿನಗಳಿಂದ ಮಡದಿಯ ಸಹಕಾರದೊಂದಿಗೆ ನಿರುಪಯುಕ್ತ ವಸ್ತುಗಳಾದ ಪ್ಲಾಸ್ಟಿಕ್, ಪೈಪ್, ಬಲೆ, ಹಳೆಯ ಬಟ್ಟೆಗಳು, ಥರ್ಮಾಕೋಲ್ ಶೀಟ್, ಕಾರ್ಡ್ಬೋರ್ಡ್, ರಟ್ಟುಗಳನ್ನು ಬಳಸಿ ಅತ್ಯಾಕರ್ಷಣೀಯ ಹೆಲಿಕಾಪ್ಟರ್ ಹಾಗೂ ಸಾಂತ ಕ್ಲಾಸ್ ಅನ್ನು ರಚಿಸಿದ್ದಾರೆ. ಇದೀಗ ಓವನ್ ರಾಡ್ರಿಗಸ್ ಅವರ ಸಾಂತ ಕ್ಲಾಸ್ ಸ್ಥಳೀಯರ ಆಕರ್ಷಣೆಯ ಕೇಂದ್ರಬಿಂದುವಾಗಿರುವುದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ವೈರಲ್ ಆಗಿದೆ.ಅತ್ಯಾಕರ್ಷಕವಾಗಿ ರಚಿಸಿದ ಗೋದಲಿಯಲ್ಲಿ ತನ್ನ ಸಾಮಾಜಿಕ ಕಳಕಳಿಯನ್ನು ಅನಾವರಣಗೊಳಿಸಿರುವ ಓವನ್ ರಾಡ್ರಿಗಸ್ ಅವರು, ಕೋವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸಿ ಶ್ಲಾಘನೆಗೆ ಒಳಗಾಗಿದ್ದಾರೆ. ಇದರೊಂದಿಗೆ ಸುರಕ್ಷಿತವಾಗಿರಿ, ಮಾಸ್ಕ್ ಧರಿಸಿ ಎಂಬ ಸಂದೇಶವನ್ನು ಅಳವಡಿಸುವ ಮೂಲಕ ವಿಶಿಷ್ಟವಾಗಿ ತಮ್ಮ ಕ್ರಿಸ್ಮಸ್ ಶುಭಾಶಯವನ್ನು ತಿಳಿಸಿದ್ದು ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಅದೇ ರೀತಿ ಅಷ್ಟೇ ಆಕರ್ಷಕವಾಗಿ ಯೇಸು ಕ್ರಿಸ್ತನ ಜನ್ಮಸ್ಥಳವಾದ ಬೆಥ್ಲೆಹೆಮ್ ನಗರವನ್ನು ಕೂಡ ರಚಿಸಿ ಗಮನ ಸೆಳೆದಿದ್ದಾರೆ.ಕಳೆದ 10 ವರ್ಷಗಳಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಅತ್ಯಾಕರ್ಷಕವಾಗಿ ಗೋದಲಿ ಹಾಗೂ ಇನ್ನಿತರ ಕಲಾಕೃತಿಗಳನ್ನು ರಚಿಸುತ್ತಾ ಬಂದಿರುವ ಕಲ್ಯಾಣಪುರದ ನಿವಾಸಿ ಓವನ್ ರಾಡ್ರಿಗಸ್ ರವರು ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಿಂದ ನಿವೃತ್ತಿಯಾದ ಬಳಿಕ ಮನೆಯಲ್ಲಿ ಚಿತ್ರ ಕಲಾವಿದರಾಗಿ ಹಲವಾರು ಚಿತ್ರಗಳನ್ನು ರಚಿಸಿ ಮೆಚ್ಚುಗೆ ಪಡೆದಿದ್ದಾರೆ. |