ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವೃತ್ತ ಹೆಸರನ್ನು ತಿರಸ್ಕರಿಸಿದ ರಾಜ್ಯ ಸರಕಾರ
ಬೆಂಗಳೂರು: ನಗರದ ಹಗದೂರು ವಾರ್ಡ್ ವ್ಯಾಪ್ತಿಯಲ್ಲಿ ಬರುವ ವರ್ತೂರು ಕೋಡಿ ವೃತ್ತಕ್ಕೆ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಸರು ಇಡುವ ಪ್ರಸ್ತಾಪವನ್ನು ರಾಜ್ಯ ಸರಕಾರ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಗದೂರು ವ್ಯಾಪ್ತಿಯ ವರ್ತೂರು ಕೋಡಿ ವೃತ್ತಕ್ಕೆ “ಮಧುಕರ್ ಶೆಟ್ಟಿ ವೃತ್ತ ಎಂದು ನಾಮಕರಣ ಮಾಡಲು 2020ರ ಮಾರ್ಚ್ 7 ರಂದು ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯು ಅಂಗೀಕಾರ ಮಾಡಿತ್ತು.
ಈ ನಿರ್ಣಯವನ್ನು ಅಂಗೀಕರಿಸುವಂತೆ ಸೆ.22 ರಂದು ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತರ ಮೂಲಕ ಪ್ರಸ್ತಾಪವನ್ನು ರವಾನೆ ಮಾಡಿತ್ತು. ಇದೀಗ ಈ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಸರಕಾರ ಅದನ್ನು ಅಂಗೀಕರಿಸಲು ಸಮ್ಮತಿಸಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಚ್ ಗಣೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ನಡುವೆ, ಈ ವಿಚಾರಕ್ಕೆ ಸಂಬಂಧಿಸಿ ಆಕ್ರೋಶ ವ್ಯಕ್ತಪಡಿಸಿರುವ ಬಿಬಿಎಂಪಿ ಕಾಂಗ್ರೆಸ್ ಮುಖಂಡ ಶಿವರಾಜ್ ಅವರು, ಬೆಂಗಳೂರಿನ ಯಾವುದೋ ವೃತ್ತಕ್ಕೆ ಏನೇನೋ ಹೆಸರುಗಳನ್ನು ಇಡುವಾಗ ಹಗದೂರು ವಾರ್ಡ್ ವ್ಯಾಪ್ತಿಯಲ್ಲಿ ಬರುವ ವರ್ತೂರು ಕೋಡಿ ವೃತ್ತಕ್ಕೆ ನಿಷ್ಠಾವಂತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಸರನ್ನು ತಿರಸ್ಕರಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.