ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿಲು ಹೋರಾಟ ನಡೆಸಬೇಕು:ಕತ್ತಲ್ ಸಾರ್

ಮಂಗಳೂರು: “ತುಳುನಾಡು ಇಂದು ಬಹಳ ವೇಗವಾಗಿ ಬದಲಾಗುತ್ತಿದೆ. ಜನರು, ಸಂಪ್ರದಾಯ, ಆಚರಣೆಗಳು ಕೂಡ ಬದಲಾಗುತ್ತಿವೆ. ಆದರೆ ಬದಲಾವಣೆಯ ಮಧ್ಯೆಯೂ ಜನರನ್ನು ಸಾಮಾಜಿಕವಾಗಿ ಬೆಸೆಯುವ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ರಂಗಚಾವಡಿ ಸಂಘಟನೆಯ ಶ್ರಮ ಶ್ಲಾಘನೀಯ” ಎಂದು ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಅವರು ಉರ್ವಾಸ್ಟೋರ್ ಬಳಿಯ ತುಳುಭವನದ ಸಿರಿ ಚಾವಡಿ ಸಭಾಂಗಣದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರಂಗಚಾವಡಿ ಸಾಹಿತ್ಯ- ಸಂಘಟನೆಯ ಆಶ್ರಯದಲ್ಲಿ ನಡೆದ  ರಂಗ ಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾತಾಡುತ್ತಿದ್ದರು. ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಮುರಳೀಧರ ಕಾಮತ್ ಕೊಂಚಾಡಿ ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ನನಗೆ ಸಿಕ್ಕ ಈ ಪ್ರಶಸ್ತಿ, ಪುರಸ್ಕಾರಕ್ಕೆ ನನ್ನೊಂದಿಗೆ ಸದಾ ಜೊತೆಗಿದ್ದು ಬೆನ್ನು ತಟ್ಟಿದ ಮನೆಮಂದಿ, ಮಿತ್ರರು, ಹಿತೈಷಿಗಳು ಕಾರಣ. ಅವರೆಲ್ಲರ ಆಶೀರ್ವಾದ ಮತ್ತು ಪ್ರೀತಿಯಿಂದ ನನಗೆ ಈ ಗೌರವ ಸಿಕ್ಕಿದೆ. ರಂಗಚಾವಡಿ ಸಂಘಟನೆಯ ಈ ಸ್ಫೂರ್ತಿ ತುಂಬುವ ಕೆಲಸ ನಿತ್ಯ ನಿರಂತರ ನಡೆಯಲಿ. ಇನ್ನಷ್ಟು ಕಲಾವಿದರು ಇವರಿಂದ ಸ್ಫೂರ್ತಿ ಪಡೆದುಕೊಳ್ಳಲಿ” ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು, “ತುಳುನಾಡಿನ ಪ್ರತಿಭೆಗಳನ್ನು ಗುರುತಿಸುವ ಅವರನ್ನು ಸನ್ಮಾನಿಸುವ ಮೂಲಕ ಜವಾಬ್ದಾರಿ ಹೆಚ್ಚಿಸುವ ಕಾರ್ಯಕ್ರಮವನ್ನು ರಂಗಚಾವಡಿ ಸಂಘಟನೆ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದಕ್ಕಾಗಿ ಸಂಘಟನೆಯ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ ಅವರು ಅಭಿನಂದನಾರ್ಹರು. ಇಂತಹ ಕಾರ್ಯಕ್ರಮಕ್ಕೆ ತುಳು ಅಕಾಡೆಮಿ ಸದಾ ಜೊತೆಗಿದ್ದು ಬೆನ್ನು ತಟ್ಟುವ ಕೆಲಸ ಮಾಡಲಿದೆ. ತುಳು ಭಾಷೆಗೆ ಲಿಪಿ ಇದೆ, ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ, ಜಗತ್ತಿನಲ್ಲಿ ಎರಡೂವರೆ ಕೋಟಿ ತುಳು ಭಾಷಿಕರಿದ್ದೇವೆ. ನಾವೆಲ್ಲರೂ ಒಂದಾಗಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಿ ರಾಜ್ಯ ಭಾಷೆಯ ಸ್ಥಾನಮಾನ ಕಲ್ಪಿಸಲು ಹೋರಾಟ ನಡೆಸಬೇಕು” ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಗೋಲ್ಡ್ ಫಿಂಚ್ ನ  ಪ್ರಸಾದ್ ಕುಮಾರ್ ಶೆಟ್ಟಿ, ಸುರತ್ಕಲ್ ಮಾತಾ ಡೆವಲಪರ್ಸ್ ಮಾಲಕ ಸಂತೋಷ್ ಕುಮಾರ್  ಶೆಟ್ಟಿ, ಉದ್ಯಮಿ ರಮಾನಾಥ ಶೆಟ್ಟಿ ಬೈಕಂಪಾಡಿ, ಉದ್ಯಮಿ ದಿವ್ಯರೂಪ ಕನ್ ಸ್ಟ್ರಕ್ಷನ್ಸ್ ಮಾಲಕ ಯಾದವ ಕೋಟ್ಯಾನ್ ಪೆರ್ಮುದೆ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ, ರಂಗಚಾವಡಿ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ,  ರಂಗನಟ ವಿ. ಜಿ. ಪಾಲ್, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ರಾಜೇಶ್ ಜಿ. ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನರೇಂದ್ರ ಕೆರೆಕಾಡು ಧನ್ಯವಾದ  ಸಮರ್ಪಿಸಿದರು.ಸಭಾ ಕಾರ್ಯಕ್ರಮದ ಬಳಿಕ “ರಾಗಧ್ವನಿ ಬಳಗ ಕುಡ್ಲ” ತಂಡದಿಂದ ಪದರಂಗಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!