ಚುನಾವಣೆ ವಿಚಾರ: ಡಿವೈಎಫ್ ಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ
ಕೊಣಾಜೆ: ಚುನಾವಣಾ ವಿಚಾರ ಮಂದಿಟ್ಟುಕೊಂಡು ಹರೇಕಳದಲ್ಲಿ ಇಂದು ಡಿವೈಎಫ್ ಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ. ಇಂದು ಬೆಳಗ್ಗೆ ಫರೀದ್ ನಗರದಲ್ಲಿ ಹರೇಕಳದ 3 ನೇ ವಾರ್ಡ್ ನ ಸಿಪಿಐಎಂ ಬೆಂಬಲಿತ ಅಭ್ಯರ್ಥಿಗಳಲ್ಲಿ ಒಬ್ಬರಾದ ಮುಹಮ್ಮದ್ ಅಶ್ರಫ್ ಅವರ ತಾಯಿಯೊಂದಿಗೆ ಕಾಂಗ್ರೆಸ್ ಕಾರ್ಯಕರ್ತ ಮುನೀರ್ ಎಂಬಾತ ಚುನಾವಣಾ ವಿಚಾರದಲ್ಲಿ ತಗಾದೆ ತೆಗೆದು ನಿಂದಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಹರೇಕಳ 3 ನೇ ವಾರ್ಡ್ ನ ಇನ್ನೋರ್ವ ಅಭ್ಯರ್ಥಿ ಇಕ್ಬಾಲ್ ಮಧ್ಯ ಪ್ರವೇಶಿಸಿ, ಮಹಿಳೆಯೊಂದಿಗೆ ಯಾಕೆ ವಾಗ್ವಾದ ನಡೆಸುತ್ತೀರಿ, ಚುನಾವಣೆ ಮುಗಿದು ಹೋದ ಅಧ್ಯಾಯ ಎಂದು ಹೇಳಿದ್ದಾರೆ. ಈ ವೇಳೆ ಕೋಪಗೊಂಡ ಮುನೀರ್, ಇಕ್ಬಾಲ್ ರನ್ನು ದೂಡಿದ್ದು ಇಬ್ಬರ ನಡುವೆ ತಳ್ಳಾಟ ನಡೆದಿದೆ ಎಂದು ಹೇಳಲಾಗಿದೆ. ಈ ಸಂದರ್ಭ ಇಕ್ಬಾಲ್ ಗಾಯಗೊಂಡಿದ್ದು ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಘಟನೆಗೆ ಸಂಬಂಧಿಸಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿರುವ ಮುನೀರ್, ತನಗೆ ಕೂಡಾ ಡಿವೈಎಫ್ ಐ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಕೊಣಾಜೆ ಪೊಲೀಸರು ಪ್ರಕರಣ ದಾಖಲಾಗಿದೆ.