ಉದ್ಯಾವರ: ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಮೃತ್ಯು
ಕಾಪು: ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟ ಘಟನೆ ಉದ್ಯಾವರದ ಪಾಪನಾಶಿನಿ ಹೊಳೆಯಲ್ಲಿ ನಡೆದಿದೆ. ಲಕ್ಷ್ಮಣ ಪೂಜಾರಿ (52) ನೀರಿನಲ್ಲಿ ಮುಳುಗಿ ಮೃತ ಪಟ್ಟ ಹಿರಿಯ ಕಾಂಗ್ರೆಸ್ ಕಾರ್ಯಕರ್ತ.
ಇವರು ಪ್ರತಿದಿನ ಉದ್ಯಾವರದ ಅಂಕುದ್ರು ಎಂಬಲ್ಲಿರುವ ಪಾಪನಾಶಿನಿ ಹೊಳೆಯಲ್ಲಿ ಕಪ್ಪೆ ಚಿಪ್ಪು ತೆಗೆದು ಮಾರಾಟ ಮಾಡುತ್ತಿದ್ದರು. ಎಂದಿನಂತೆ ನಿನ್ನೆ ಕಪ್ಪೆ ಚಿಪ್ಪು ತರುವುದಾಗಿ ಮನೆಯಲ್ಲಿ ಹೇಳಿ ಹೋದವರು ಸಂಜೆಯಾದರೂ ಮನೆಗೆ ಹಿಂತಿರುಗಿಲ್ಲ. ಲಕ್ಷ್ಮಣ ಅವರು ಮನೆಗೆ ಬಾರದಿರುವುದನ್ನು ಅರಿತ ಮನೆಯವರು ಹಾಗೂ ನೆರೆ ಕರೆಯವರು ಸೇರಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಲಕ್ಷ್ಮಣ ಅವರ ಮೃತ ದೇಹ ಪಾಪನಾಶಿನಿ ಹೊಳೆಯಲ್ಲಿ ಪತ್ತೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮಣ ಅವರು ಕಪ್ಪೆ ಚಿಪ್ಪು ತೆಗೆಯುವ ಸಮಯ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.