ಉಡುಪಿ: ಯಕ್ಷಗಾನ, ಉತ್ಸವ, ಮೆಹಂದಿ, ಕೋಲಗಳಿಗೂ ನಿರ್ಬಂಧ?
ಉಡುಪಿ: ಕೋವಿಡ್ ನ ರೂಪಾಂತರದ ಪ್ರಭಾವವನ್ನು ನಿಯಂತ್ರಿಸಲು ಸರಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಂತೆ ಡಿ. 24ರ ರಾತ್ರಿ 11ರಿಂದ ಜ.2ರ ಬೆಳಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಗ ಸೂಚಿಯಲ್ಲಿ ಸೂಚಿಸಿರುವ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ತುರ್ತು ಸೇವೆಗಳನ್ನು ಹೊರತು ಪಡಿಸಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಉಡುಪಿ ಜಿಲ್ಲಾಡಳಿತ ಹೇಳಿದೆ. ಈ ಕುರಿತಂತೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಮಾಹಿತಿ ನೀಡಿ, ರಾತ್ರಿ ನಡೆಯುವ ಯಕ್ಷಗಾನ, ದೇವಸ್ಥಾನಗಳ ಉತ್ಸವಗಳು, ಮೆಹಂದಿಯಂತಹ ಕಾರ್ಯಕ್ರಮಗಳು, ಕೋಲಗಳಿಗೆ ನಿರ್ಬಂಧ ಹೇರಲಾಗಿದ್ದು. ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಯವರು ನೀಡಿದ ನಿರ್ದೇಶನದಂತೆ ಗುರುವಾರ ರಾತ್ರಿಯಿಂದ ಕರ್ಫ್ಯೂ ಜಾರಿಗೊಳಿಸಲು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು. ಇನ್ನು ಉಡುಪಿ ಜಿಲ್ಲೆಗೆ ಸಂಬಂಧಿಸಿ ಪ್ರತ್ಯೇಕ ಆದೇಶವನ್ನು ಇಂದು ಹೊರಡಿಸಲಾಗುವುದು ಎಂದ ಅವರು, ಈ ಹಿಂದೆ ಕರ್ಫ್ಯೂ ಇದ್ದಾಗ ಪತ್ರಿಕೆಗಳಿಗೆ ರಿಯಾಯಿತಿ ನೀಡಲಾಗಿತ್ತು. ಅದರಂತೆಯೇ ಈ ಬಾರಿಯೂ ಪತ್ರಿಕೆಗಳ ಸಾಗಾಟ ಮತ್ತು ವಿತರಣೆಗೆ ರಿಯಾಯಿತಿ ಇರಲಿದೆ. ಯಾವುದೇ ಸಾಮಾನು ಸರಂಜಾಮುಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ಚಂದ್ರ ಸೂಡ ಅವರು ಮಾಹಿತಿ ನೀಡಿ,ಕ್ರಿಸ್ಮಸ್, ಹೊಸ ವರ್ಷಾಚರಣೆಯನ್ನು ಸರಳವಾಗಿ ನಡೆಸಬೇಕು. ನಾವು ಜಾಗ್ರತೆ ಮಾಡಿದರೆ ಮೂರು ತಿಂಗಳಲ್ಲಿ ಕೊರೊನಾ ಮುಕ್ತವಾಗಬಹುದು ಎಂದಿದ್ದಾರೆ. ಅಲ್ಲದೆ ರಾತ್ರಿ ನಡೆಯುವ ಕಾರ್ಖಾನೆಗಳಲ್ಲಿ ಶೇ.50ರಷ್ಟು ಸಿಬಂದಿಯನ್ನು ಇರಿಸಿಕೊಂಡು ಕಾರ್ಯ ನಿರ್ವಹಣೆ ಮಾಡಬಹುದು ಎಂದು ತಿಳಿಸಿದ್ದಾರೆ. |