ಉಡುಪಿ: ಜ.1ರಿಂದ ಎಸ್ಸೆಸ್ಸೆಲ್ಸಿಗೆ ಅರ್ಧ ದಿನ ಶಾಲೆ, 6ರಿಂದ 9ನೇ ತರಗತಿಗೆ ವಿದ್ಯಾಗಮ–2
ಉಡುಪಿ: ಶೈಕ್ಷಣಿಕ ವರ್ಷ ಕೊನೆಗೊಳ್ಳುತ್ತ ಬಂದರೂ , ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗದಿರುವುದರಿಂದ ರಾಜ್ಯದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹಾಗೂ ಬಾಲ್ಯ ವಿವಾಹ ಹೆಚ್ಚಾಗುವ ಸಂಭವವಿದ್ದು, ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಜ.1ರಿಂದ ಸುರಕ್ಷತೆ ಹಾಗೂ ಮುಂಜಾಗ್ರತೆಗಳೊಂದಿಗೆ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಮುಖ್ಯಸ್ಥರಿಗೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಡಿಡಿಪಿಐ ನಾಗೂರ ತಿಳಿಸಿದ್ದಾರೆ. ಬೋರ್ಡ್ ಹೈಸ್ಕೂಲ್ನಲ್ಲಿ ನಡೆದ ಎಲ್ಲ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಯರ ಸಭೆಯಲ್ಲಿ ಡಿಡಿಪಿಐ ತಿಳಿಸಿದ್ದಾರೆ. ಜ.1ರಿಂದ ಶಾಲಾ ಆವರಣದಲ್ಲಿ 6 ರಿಂದ 9ನೇ ತರಗತಿವರೆಗೆ ವಿದ್ಯಾಗಮ–2 ಕಾರ್ಯಕ್ರಮ ಆರಂಭಿಸಬೇಕು, 10ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಧದಿನ ತರಗತಿ ನಡೆಸಬೇಕು, ಒಂದು ತಂಡದಲ್ಲಿ 15 ವಿದ್ಯಾರ್ಥಿಗಳು ಮಾತ್ರ ಇರುವಂತೆ ನೋಡಿಕೊಳ್ಳಬೇಕು. ಇದಕ್ಕೂ ಮುನ್ನ ಶಾಲಾ ಆವರಣ ಹಾಗೂ ಕೊಠಡಿಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಸ್ವಚ್ಛಗೊಳಿಸಬೇಕು, ಶೌಚಾಲಯದಲ್ಲಿ ನಿರಂತರ ನೀರು ಸರಬರಾಜು ಇರಬೇಕು, ಪ್ರತಿ ಮಗು ಶೌಚಾಲಯ ಬಳಸಿದ ಬಳಿಕ ಸೋಡಿಯಂ ಹೈಪೊಕ್ಲೋರೈಡ್ನಿಂದ ಸ್ವಚ್ಛಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ. ಡಿ.28ರೊಳಗೆ ಶಾಲೆಯನ್ನು ಸ್ವಚ್ಛಗೊಳಿಸಿರುವ ಬಗ್ಗೆ ಶಾಲಾ ಮುಖ್ಯಸ್ಥರು ಸಿಆರ್ಪಿಗೆ ವರದಿ ಸಲ್ಲಿಸಬೇಕು. ಮಕ್ಕಳು ಶಾಲೆಗೆ ಬಂದ ಬಳಿಕ ವಸ್ತುಗಳನ್ನು ಮುಟ್ಟದಂತೆ ತಿಳಿವಳಿಕೆ ನೀಡುವುದು, ವಿದ್ಯಾರ್ಥಿಗಳ ಆರೋಗ್ಯ ಕಾಳಜಿಗೆ ಪ್ರತಿ ಶಾಲೆಯಲ್ಲಿ ಶಿಕ್ಷಕರೊಬ್ಬರನ್ನು ಮೆಂಟರ್ ಆಗಿ ನೇಮಿಸುವುದು, ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಲು ಸೂಚಿಸುವುದು, ತರದಿದ್ದರೆ ಬಿಸಿನೀರಿನ ವ್ಯವಸ್ಥೆ ಮಾಡುವುದು ಶಾಲಾ ಮುಖ್ಯಸ್ಥರ ಕರ್ತವ್ಯ ಎಂದು ಡಿಡಿಪಿಐ ನಿರ್ದೇಶನ ನೀಡಿದ್ದಾರೆ. ಮಕ್ಕಳು ಕೈತೊಳೆಯಲು ಸೋಪ್ ವ್ಯವಸ್ಥೆ ಮಾಡುವುದು, ಎಲ್ಲ ಶಿಕ್ಷಕರು ಶಾಲೆ ಪ್ರವೇಶಿಸುವ 72 ಗಂಟೆ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಇದ್ದರೆ ಮಾತ್ರ ಶಾಲೆಗೆ ಹಾಜರಾಗಬೇಕು, ಪ್ರತಿ ಶಾಲೆಯಲ್ಲಿ ಒಂದು ಕೊಠಡಿಯನ್ನು ಐಸೊಲೇಷನ್ ಕೊಠಡಿಯಾಗಿ ಗುರುತಿಸಿ, ಶೀತ, ಕೆಮ್ಮು, ನೆಗಡಿ ಸೋಂಕು ಕಂಡುಬಂದ ಮಕ್ಕಳನ್ನು ಕೊಠಡಿಯಲ್ಲಿ ಪ್ರತ್ಯೇಕಿಸಬೇಕು ಎಂದು ಡಿಡಿಪಿಐ ಸೂಚನೆ ನೀಡಿದ್ದಾರೆ. ‘ದಾಖಲಾತಿ ಕಡ್ಡಾಯ, ಹಾಜರಾತಿ ಅಲ್ಲ’ 50 ವರ್ಷ ಮೇಲ್ಪಟ್ಟ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಬಳಸಬೇಕು, ವಿದ್ಯಾರ್ಥಿಗಳು ಮಾಸ್ಕ್ ಬಳಸುವಂತೆ ಕ್ರಮ ವಹಿಸಬೇಕು, ಶಾಲಾ ದಾಖಲಾತಿ ಕಡ್ಡಾಯ ಆದರೆ, ಹಾಜರಾಗಿ ಕಡ್ಡಾಯವಲ್ಲ, ಮಕ್ಕಳಿಗೆ ಶೀತ, ನೆಗಡಿ, ಜ್ವರ ಇಲ್ಲದ ಬಗ್ಗೆ ಪೋಷಕರಿಂದ ದೃಢೀಕರಣ ಪತ್ರ ಪಡೆಯಬೇಕು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿ ನೆಗೆಟಿವ್ ಬಂದರೆ ಮಾತ್ರ ದಾಖಲಾತಿ ಮಾಡಿಕೊಳ್ಳಬೇಕು, ಎಲ್ಲ ಶಾಲೆಗಳ ಮುಖ್ಯಸ್ಥರು ಎಸ್ಡಿಎಂಸಿ ಹಾಗೂ ದಾನಿಗಳ ನೆರವಿನಿಂದ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಡಿಡಿಪಿಐ ನಾಗೂರ ನಿರ್ದೇಶನ ನೀಡಿದ್ದಾರೆ. |