ಮಂಗಳೂರು – ಮುಂಬೈ ಇಂದಿನಿಂದ ನಿತ್ಯ ಗೋಏರ್ ವಿಮಾನ

ಮಂಗಳೂರು: ಗೋಏರ್ ವಿಮಾನ ಯಾನ ಸಂಸ್ಥೆ ತನ್ನ ದೇಶೀಯ ಜಾಲವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದ್ದು, ಮುಂಬೈನಿಂದ ಮಂಗಳೂರಿಗೆ ನಿತ್ಯ ನೇರ ವಿಮಾನ ಸೌಲಭ್ಯವನ್ನು ಆರಂಭಿಸಿದೆ.

ಡಿ.24 ರಿಂದ ಹೊಸ ಸೇವೆ ಆರಂಭವಾಗಿದ್ದು, ಅತ್ಯಾಧುನಿಕ ಏರ್‌ಬಸ್ 320ನಿಯೋ ಮೂಲಕ ಗೋಏರ್ ಮಂಗಳೂರು ಮತ್ತು ಮುಂಬೈಯನ್ನು ಸಂಪರ್ಕಿಸಲಿದೆ ಎಂದು ಗೋಏರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೌಶಿಕ್‌ ಖೋನಾ ತಿಳಿಸಿದರು.

ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿಗೆ ತ್ವರಿತ ಮತ್ತು ಅನುಕೂಲಕರ ಸಂಪರ್ಕವನ್ನು ಒದಗಿಸುವ ದೃಷ್ಟಿಯಿಂದ ಈ ವಿಮಾನದ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ವಿಮಾನ ಪ್ರಯಾಣದ ಟಿಕೆಟ್ ಬುಕ್ಕಿಂಗ್ ಅನ್ನು ಎಲ್ಲ ಆನ್‌ಲೈನ್‌, ಏಜೆಂಟರ್‌ ಮೂಲಕ ಸೇರಿದಂತೆ ಎಲ್ಲ ರೀತಿಯಿಂದಲೂ ಮಾಡಲು ಅವಕಾಶವಿದೆ ಎಂದು ತಿಳಿಸಿದರು. ಜಿ8 0338 ಗೋಏರ್ ವಿಮಾನ ನಿತ್ಯ ಬೆಳಿಗ್ಗೆ 9.30ಕ್ಕೆ ಮಂಗಳೂರಿನಿಂದ ಹೊರಟು, 11 ಗಂಟೆಗೆ ಮುಂಬೈ ತಲುಪಲಿದೆ. ಜಿ8 0335 ವಿಮಾನ ಮುಂಬೈನಿಂದ ಬೆಳಿಗ್ಗೆ 7.40ಕ್ಕೆ ಹೊರಟು 9 ಗಂಟೆಗೆ ಮಂಗಳೂರು ತಲುಪಲಿದೆ ಎಂದರು.

ದೇಶದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಹಾಗೂ ಕರ್ನಾಟಕದ ಪ್ರಮುಖ ಬಂದರು ನಗರವಾಗಿರುವ ಮಂಗಳೂರು ಮತ್ತು ಮುಂಬೈನ ವ್ಯವಹಾರ ಮತ್ತು ಪ್ರವಾಸೋದ್ಯಮ ಇನ್ನಷ್ಟು ಪ್ರಗತಿ ಹೊಂದಲು ಇದು ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

‘ದೇಶೀಯ ವಿಮಾನ ಯಾನ ಬೇಡಿಕೆಯ ಪುನಶ್ಚೇತನ ಕಂಡುಬರುತ್ತಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಶೇ 10ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನವೆಂಬರ್‌ನಲ್ಲಿ ಸುಮಾರು 63,54,000 ಜನರು ವಿಮಾನ ಸೇವೆ ಬಳಸಿದ್ದಾರೆ. ಈ ಬೇಡಿಕೆಗೆ ಸ್ಪಂದಿಸಿ, ಮುಂಬೈನಿಂದ ಮಂಗಳೂರಿಗೆ ದೈನಿಕ ನೇರ ವಿಮಾನ ಸೇವೆ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಅಂತರರಾಷ್ಟ್ರೀಯ ವಿಮಾನ ಶೀಘ್ರ
ಮಂಗಳೂರಿನಿಂದ ಗಲ್ಫ್‌ ರಾಷ್ಟ್ರಗಳಿಗೆ ಹಾಗೂ ಮಾಲ್ದೀವ್ಸ್‌ಗೆ ವಿಮಾನ ಸೇವೆ ಆರಂಭಿಸುವ ಕುರಿತು ಗೋಏರ್‌ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕೌಶಿಕ್‌ ಖೋನಾ ತಿಳಿಸಿದರು.

ಮಂಗಳೂರಿನಿಂದ ಮುಂಬೈ ಮೂಲಕ ಗಲ್ಫ್‌ ರಾಷ್ಟ್ರಗಳಿಗೆ ಹಾಗೂ ಮಂಗಳೂರಿನಿಂದ ಬೆಂಗಳೂರಿನ ಮೂಲಕ ಮಾಲ್ದೀವ್ಸ್‌ನ ಮಾಲೆಗೆ ವಿಮಾನ ಸೇವೆ ಆರಂಭಿಸಲಾಗುವುದು. ಬರುವ ದಿನಗಳಲ್ಲಿ ಮಂಗಳೂರಿನಿಂದ ಇನ್ನೂ ಹೆಚ್ಚಿನ ನಗರಗಳಿಗೆ ವಿಮಾನ ಆರಂಭಿಸಲು ಗೋಏರ್‌ ಉತ್ಸುಕವಾಗಿದೆ ಎಂದರು. ಇನ್ನೆರಡು ತಿಂಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ವಿಮಾನ ಆರಂಭಿಸಲಾಗುವುದು. ಸದ್ಯಕ್ಕಿರುವ ಮಂಗಳೂರು ಅಹ್ಮದಾಬಾದ್‌ ವಿಮಾನದ ಸೇವೆಯನ್ನು ಮುಂದುವರಿಸಲಾಗುವುದು. ಮುಂಬೈನಲ್ಲಿ ಸುಮಾರು 3 ಗಂಟೆಯ ಕಾಯುವಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು. 

Leave a Reply

Your email address will not be published. Required fields are marked *

error: Content is protected !!