ಮಂಗಳೂರು-ಕಾರ್ಕಳ-ಶೃಂಗೇರಿ ಮಧ್ಯೆ ರೈಲ್ವೆ: ಸರ್ವೆ ಕಾರ್ಯ ಪ್ರಗತಿಯಲ್ಲಿ- ಸಂಸದೆ ಶೋಭಾ
ಕಾರ್ಕಳ: ಮಂಗಳೂರು-ಕಾರ್ಕಳ-ಶೃಂಗೇರಿ ಸಂಪರ್ಕಿಸುವಂತೆ ರೈಲ್ವೆ ಯೋಜನೆ ರೂಪಿತಗೊಳ್ಳುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಡೂರು ಜಂಕ್ಷನ್ನಿಂದ ಶೃಂಗೇರಿವರೆಗೆ ಸರ್ವೆ ಕಾರ್ಯ ನಡೆದಿದೆ. ಕೇಂದ್ರ ಸರ್ಕಾರದಿಂದ ಕಾರ್ಕಳಕ್ಕೆ ಸಿಆರ್ಎಫ್ /ಗ್ರಾಮ ಸಡಕ್ ಯೋಜನೆಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಬಹಳಷ್ಟು ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತನೆಗೊಂಡಿವೆ. ಕಸ್ತೂರಿರಂಗನ್ ವರದಿಯಿಂದ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು’ ಎಂದರು.
‘ಕೇರಳದಲ್ಲಿ ಎಪಿಎಂಸಿ ಇಲ್ಲ. ಎಡಪಂಥೀಯ ಪಕ್ಷಗಳು ಕೃಷಿ ನೀತಿ ಕುರಿತು ಮಾತನಾಡುತ್ತಿವೆ. ಕೇಂದ್ರ ಸರ್ಕಾರ ಮಸೂದೆ ಜಾರಿಗೊಳಿಸುವುದಕ್ಕೆ ಮುನ್ನ ವಿವರವಾದ ಚರ್ಚೆ ನಡೆಸಿತ್ತು. ನಿರ್ದಿಷ್ಟ ಸಮಿತಿಯಲ್ಲಿ ಚರ್ಚೆಯಾಗಿದೆ. ಆದರೂ ಈಗ ವಿರೋಧ ಮಾಡಲಾಗುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಎಪಿಎಂಸಿ ತಿದ್ದುಪಡಿಯ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಡಿಎಂಕೆ 2016ರಲ್ಲಿ ಎಪಿಎಂಸಿ ತಿದ್ದುಪಡಿ ತರುವುದಾಗಿ ಹೇಳಿತ್ತು. 2010ರಲ್ಲಿ ಕೇಂದ್ರ ಸಚಿವರಾಗಿದ್ದ ಶರತ್ ಪವಾರ್ ಎಪಿಎಂಸಿ ತಿದ್ದುಪಡಿ ಕುರಿತು ಮುಖ್ಯಮಂತ್ರಿಗಳ ಅಭಿಪ್ರಾಯಗಳನ್ನು ಕ್ರೋಡಿಕರಿಸಿದ್ದರು. ರಾಹುಲ್ಗಾಂಧಿ ಅವರು ಎಪಿಎಂಸಿಯಲ್ಲಿ ಹಣ್ಣು ತರಕಾರಿಗಳನ್ನು ಹೊರತುಪಡಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೇಜ್ರಿವಾಲ್ ಅವರು ಕೂಡಾ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೃಷಿ ನೀತಿ ಪರ ಇದ್ದರು. ಆದರೆ ಈಗ ಎಲ್ಲರೂ ವಿರೋಧಿಸುತ್ತಿರುವುದು ದುರದೃಷ್ಟ’ ಎಂದರು.
‘ದೇಶದಲ್ಲಿ ಮತಾಂತರದ ಕುರಿತು ಮೊದಲ ಬಾರಿ ಮತಾಂತರ ನಿಷೇಧ ಕಾಯ್ದೆಗೆ ಒತ್ತು ನೀಡಿದವರು ತಮಿಳುನಾಡಿದ ಅಂದಿನ ಮುಖ್ಯಮಂತ್ರಿ ಜಯಲಲಿತಾ. ಗೋಹತ್ಯೆ ನಿಷೇಧ ಕಾಯ್ದೆ 2008ರಲ್ಲಿ ಜಾರಿಗೆ ತರುವ ಪ್ರಯತ್ನ ಮಾಡಿದ್ದರೂ ಅದು ನನೆಗುದಿಗೆ ಬಿತ್ತು. ಈಗ ಅಂತಿಮ ಹಂತದಲ್ಲಿದೆ. ಅನುಷ್ಠಾನ ರಾಜ್ಯ ಸರ್ಕಾರದಿಂದಲೇ ಆಗಬೇಕು’ ಎಂದರು.
ಶಾಸಕ ವಿ.ಸುನೀಲ್ ಕುಮಾರ್, ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ನಗರಾಧ್ಯಕ್ಷ ಅನಂತಕೃಷ್ಣ ಶೆಣೈ, ಪುರಸಭಾ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಪಲ್ಲವಿ ರಾವ್, ಹರೀಶ್ ಶೆಣೈ, ನವೀನ್ ನಾಯಕ್, ರವೀಂದ್ರಕುಮಾರ್ ಉಪಸ್ಥಿತರಿದ್ದರು.