ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ, ಮಗು ಮಾರಾಟ!
ಚಿಕ್ಕಮಗಳೂರು: ನಗರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿದ್ದ ಶಿಶು ಮೃತಪಟ್ಟಿದೆ ಎಂದು ಸುಳ್ಳು ಹೇಳಿ, ಶಿಶುವನ್ನು ಮಾರಾಟ ಮಾಡಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಅನಾಮಧೇಯ ದೂರು ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 24 ರಂದು ಈ ಘಟನೆ ನಡೆದಿದ್ದು ಈ ಬಗ್ಗೆ ಡಿ.18 ಸಮೀತಿಗೆ ದೂರು ಬಂದಿದೆ. ದೂರಿನ ಕುರಿತಂತೆ ಪರಿಶೀಲನೆ ನಡೆಸಿರುವ ಸಮಿತಿಯ ಅಧಿಕಾರಿಗಳು ಈಗಾಗಲೇ ಸಂಬಂಧ ಪಟ್ಟವರನ್ನು ಕರೆಸಿ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಏ.21ರಂದು ಗುಲ್ಲನ್ಪೇಟೆ ಗ್ರಾಮದ ಎಸ್ಟೇಟ್ನ ಕಾರ್ಮಿಕ ಮಹಿಳೆ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. 23ರಂದು ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದರು. ‘ಶಿಶು ಹಾಲು ಕುಡಿಯುತ್ತಿಲ್ಲ’ ಎಂದು ಬಾಣಂತಿ, ಆಯಾಗೆ ಮಾರನೇ ದಿನ ಅಂದರೆ ಏ.24ರಂದು ತಿಳಿಸಿದ್ದಾರೆ. ಈ ವೇಳೆ, ಮಗುವನ್ನು ಐಸಿಯುನಲ್ಲಿ ಇಡುವುದಾಗಿ ಹೇಳಿ ಕರೆದುಕೊಂಡು ಹೋದ ಆಯಾ, ಮುಕ್ಕಾಲು ಗಂಟೆ ನಂತರ ವಾಪಸ್ ಬಂದು ಶಿಶು ಮೃತಪಟ್ಟಿದೆ ಎಂದು ತಿಳಿಸಿದ್ದರು. ಅಲ್ಲದೆ ಬಾಣಂತಿ ಮತ್ತು ಅವರ ಪತಿಗೆ ಆಸ್ಪತ್ರೆ ಗೇಟಿನ ಬಳಿಗೆ ಬರುವಂತೆ ಸೂಚಿಸಿ, ಬೇರೊಂದು ಶಿಶುವಿನ ಶವ ನೀಡಿದ್ದು, ಸಿಬ್ಬಂದಿಯೇ ಅಂತ್ಯಸಂಸ್ಕಾರ ಮಾಡುವುದಾಗಿ ದಂಪತಿಯಿಂದ 350 ರೂಪಾಯಿ ವಸೂಲಿ ಮಾಡಿ ಆಸ್ಪತ್ರೆಯಿಂದ ಕಳುಹಿಸಿದ್ದಾರೆ ಎಂದು ಪ್ರಕರಣಕ್ಕೆ ಸಂಬಂಧಪಟ್ಟವರ ಹೇಳಿಕೆಗಳಿಂದ ತಿಳಿದುಬಂದಿದೆ ಎನ್ನಲಾಗಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಜನಿಸಿದ ಮಗು ಜೀವಂತವಾಗಿರುವುದು ಖಚಿತವಾಗಿದೆ. ಆದರೆ, ಇನ್ನೂ ಪತ್ತೆಯಾಗಿಲ್ಲ’. ಕಾರ್ಮಿಕ ಮಹಿಳೆಗೆ ಇದು ೫ ನೇ ಮಗುವಾಗಿದ್ದು ಉಳಿದ ನಾಲ್ಕು ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಹಸುಗೂಸನ್ನು 30,000 ರೂಪಾಯಿ ನೀಡಿ ದಂಪತಿಯಿಂದ ಪಡೆದಿರುವುದಾಗಿ ಆಯಾ ಹೇಳಿದ್ದು, ಈ ವಿಷಯ ಯಾರಿಗೂ ತಿಳಿಸಬೇಡಿ, ಇನ್ನು 25,000 ರೂ. ಕೊಡುತ್ತೇನೆ ಎಂದು ಪದೇ ಪದೇ ಫೋನ್ ಮಾಡಿ ಹೇಳಿದ್ದಾರೆ’ ಎಂದು ಎಸ್ಟೇಟ್ ರೈಟರ್ ಲಕ್ಷ್ಮಣ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. |