ಪಡುಕರೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಮೆರುಗು: ‘ಸಿರೆನಾ’ ಐಷಾರಾಮಿ ಬೀಚ್ ರೆಸಾರ್ಟ್ ಲೋಕಾರ್ಪಣೆ

9 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ತಾಣ ನಿರ್ಮಾಣ– ಸ್ಥಳೀಯರಿಗೆ ಉದ್ಯೋಗ, ಕರಾವಳಿಗೆ ಅಂತಾರಾಷ್ಟ್ರೀಯ ಪ್ರವಾಸಿ ಗುರುತು ನೀಡುವ ಆಶಯ: ನಾಡೋಜ ಡಾ.ಜಿ. ಶಂಕರ್

ಉಡುಪಿ: ಕರಾವಳಿಯ ಪ್ರಕೃತಿ ಸೌಂದರ್ಯ, ಕಡಲ ಅಲೆಗಳ ನಿನಾದ ಹಾಗೂ ಸಮುದ್ರ–ಹಿನ್ನೀರಿನ ಸಂಗಮದ ರಮಣೀಯತೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಮಲ್ಪೆ ಸಮೀಪದ ಪಡುಕರೆಯಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ‘ಸಿರೆನಾ ಲಕ್ಷುರಿ ಬೀಚ್ ರೆಸಾರ್ಟ್’ ಶನಿವಾರ ಲೋಕಾರ್ಪಣೆಗೊಂಡಿತು.
ಶ್ಯಾಮಿಲಿ ಸಮೂಹ ಸಂಸ್ಥೆಯ ಸಹಸಂಸ್ಥೆಯಾದ ಉಡುಪಿ ಕೋಸ್ಟಲ್‌ವುಡ್ ರೆಸಾರ್ಟ್‌ನ ಈ ಯೋಜನೆಯು ಸುಮಾರು 9 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ನಾಡೋಜ ಡಾ. ಜಿ. ಶಂಕರ್ ಅವರು ಗಣ್ಯರು, ಹಿತೈಷಿಗಳು ಹಾಗೂ ಕುಟುಂಬಸ್ಥರೊಂದಿಗೆ ದೀಪ ಪ್ರಜ್ವಲಿಸುವ ಮೂಲಕ ರೆಸಾರ್ಟ್ ಉದ್ಘಾಟಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಆಶಯ: ನಾಡೋಜ ಡಾ. ಜಿ. ಶಂಕರ್ ಮಾತನಾಡಿ, ದೈವ–ದೇವರ ಅನುಗ್ರಹ ಹಾಗೂ ಹಿರಿಯರ ಪ್ರೇರಣೆಯಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ರತ್ನಗಿರಿಯಿಂದ ಕೇರಳದವರೆಗೆ ಈ ಮಾದರಿಯ ರೆಸಾರ್ಟ್‌ಗಳು ಇಲ್ಲ. ಪಡುಕರೆಯಲ್ಲಿ ಸಿರೆನಾ ಲಕ್ಷುರಿ ಬೀಚ್ ರೆಸಾರ್ಟ್ ಆರಂಭಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜತೆಗೆ ಇಲ್ಲಿನ ಪ್ರವಾಸಿ ತಾಣಗಳನ್ನು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶವಿದೆ. 2018ರಲ್ಲೇ ಈ ಜಾಗ ಮಂಜೂರಾಗಿದ್ದು, ಜಿಎಸ್‌ಟಿ ಸಹಿತ ಈವರೆಗೆ ₹1 ಕೋಟಿಗೂ ಅಧಿಕ ಸೇವಾ ಶುಲ್ಕ ಪಾವತಿಸಲಾಗಿದೆ ಎಂದರು.

ಶ್ಯಾಮಿಲಿ ಸಮೂಹ ಸಂಸ್ಥೆಯ ರೆಸಾರ್ಟ್ ಉದ್ಯಮದಿಂದ ದೊರೆಯುವ ಲಾಭಾಂಶದ ಒಂದು ಭಾಗವನ್ನು ಸಮಾಜಸೇವೆ, ದೀನದಲಿತರು, ದುರ್ಬಲರು ಹಾಗೂ ಅಸಹಾಯಕರ ಸೇವೆಗೆ ಮೀಸಲಿಡಲಾಗುವುದು. ಈ ಕಾರ್ಯಕ್ಕೆ ಎಲ್ಲರ ಸಲಹೆ ಮತ್ತು ಸಹಕಾರ ಅಗತ್ಯ ಎಂದು ತಿಳಿಸಿದರು.

ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮ: ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯ ಸಚೇತಕ ಮಂಜುನಾಥ ಭಂಡಾರಿ ಮಾತನಾಡಿ, ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಸ್ಟಾರ್ ಹೋಟೆಲ್‌ಗಳು ಹಾಗೂ ಬ್ರ್ಯಾಂಡೆಡ್ ರೆಸಾರ್ಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಡಾ. ಜಿ. ಶಂಕರ್ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಸಿರೆನಾ ರೆಸಾರ್ಟ್ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಪಡುಕರೆ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ರೆಸಾರ್ಟ್ ರೂಪುಗೊಂಡಿದೆ ಎಂದರು.

ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಕರಾವಳಿಯ ಆರ್ಥಿಕತೆಗೆ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಎರಡೂ ಪೂರಕವಾಗಿವೆ. ಇವೆರಡೂ ಪರಸ್ಪರ ಸಹಕಾರದೊಂದಿಗೆ ಮುನ್ನಡೆಯಬೇಕು. ಸಮುದ್ರ ಮತ್ತು ಅಳಿವೆಬಾಗಿಲು ಹೊಂದಿರುವ ಈ ಪ್ರದೇಶ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ನಟ ರೂಪೇಶ್ ಶೆಟ್ಟಿ ಶುಭ ಹಾರೈಸಿದರು. ‘ಪ್ರೇಮದ ಊರಲಿ’ ಕನ್ನಡ ಚಿತ್ರದ ನಾಯಕ ಶ್ರೀರಾಮ್ ಹಾಗೂ ನಾಯಕಿ ತಪಸ್ವಿನಿ ಪೂಣಚ್ಚ ಉಪಸ್ಥಿತರಿದ್ದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ಮಾಜಿ ಸದಸ್ಯೆ ಎಡ್ಲಿನ್ ಕರ್ಕಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಉದ್ಯಮಿಗಳಾದ ಆನಂದ ಸಿ. ಕುಂದರ್, ಪುರುಷೋತ್ತಮ್ ಪಿ. ಶೆಟ್ಟಿ, ಮನೋಹರ್ ಎಸ್. ಶೆಟ್ಟಿ, ಕರ್ನಾಟಕ ಮೆರಿಟೈಮ್ ಬೋರ್ಡ್ ಸದಸ್ಯ ಮದನ್ ಕುಮಾರ್ ಮೊದಲಾದವರು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!