ಬೆಂಗಳೂರಿನಲ್ಲಿ ಭೀಕರ ಅಪಘಾತಕ್ಕೆ ಕೋಟ ಪಡುಕೆರೆಯ ಹೋಟೆಲ್ ಉದ್ಯಮಿ ಬಲಿ

ಉಡುಪಿ: ಬೆಂಗಳೂರಿನ ಬಿಡದಿ ಸಮೀಪ ಸಂಭವಿಸಿದ ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿ ಕೋಟ ಪಡುಕೆರೆಯ ನಿವಾಸಿ, ಹೋಟೆಲ್ ಉದ್ಯಮಿ ವಿಶ್ವನಾಥ ಎಚ್. (55) ಮೃತಪಟ್ಟಿದ್ದಾರೆ.

ಮಣೂರು-ಪಡುಕೆರೆಯ ಜಟ್ಟಿಗೇಶ್ವರ ದೈವಸ್ಥಾನದ ಸಮೀಪದ ನಿವಾಸಿಯಾಗಿದ್ದ ವಿಶ್ವನಾಥ ಅವರು ನರಸಿಂಹ ಮೊಗವೀರ ಅವರ ಪುತ್ರ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಸುಮಾರು 33 ವರ್ಷಗಳ ಹಿಂದೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದ ಅವರು, ಬಳಿಕ ಬೆಂಗಳೂರಿಗೆ ತೆರಳಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಬಿಡದಿಯಲ್ಲಿ ‘ಕರಾವಳಿ ಕಿಚನ್’ ಹೆಸರಿನ ಹೋಟೆಲ್ ನಡೆಸುತ್ತಿದ್ದರು.
ಗುರುವಾರ ರಾತ್ರಿ ಹೋಟೆಲ್‌ನ ದೈನಂದಿನ ವ್ಯವಹಾರ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವಿಶ್ವನಾಥ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ಬೆಂಗಳೂರಿನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹುಟ್ಟೂರಿಗೆ ತರಲು ಕುಟುಂಬಸ್ಥರು ವ್ಯವಸ್ಥೆ ಮಾಡುತ್ತಿದ್ದಾರೆ. ಶನಿವಾರ ಬೆಳಿಗ್ಗೆ ಮಣೂರು-ಪಡುಕೆರೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!