“ಗೃಹಲಕ್ಷ್ಮಿ”ಯರಿಗೆ ಸರ್ಕಾರದಿಂದ ದೀಪಾವಳಿ ಬಂಪರ್ ಗಿಫ್ಟ್: 3 ಕಂತಿನ ಹಣ ಒಂದೇ ಬಾರಿ ಬಿಡುಗಡೆ!

ಬೆಂಗಳೂರು: ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಯೋಜನೆಯ 34, 35 ಮತ್ತು 36ನೇ ಕಂತುಗಳನ್ನು ಸರ್ಕಾರ ಒಟ್ಟಿಗೆ ಬಿಡುಗಡೆ ಮಾಡಲಿದೆ.

ಇದಕ್ಕಾಗಿ ಒಟ್ಟು ₹7,405.86 ಕೋಟಿ ಹಣವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಮ್ಮೆಲೆ ಬಿಡುಗಡೆ ಮಾಡಲಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಇದಕ್ಕೂ ಮೊದಲು ತೀವ್ರ ಆರ್ಥಿಕ ಕೊರತೆಯಿಂದಾಗಿ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ‘ಗೃಹಲಕ್ಷ್ಮಿ’ ಯೋಜನೆಯ ಅಂದಾಜು 4,000 ಕೋಟಿ ರೂ. ಹಣ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ಬಜೆಟ್ ಲಭ್ಯತೆ ಆಧರಿಸಿದ ಈ ನೆರವನ್ನು ಕಾನೂನುಬದ್ಧ ಹಕ್ಕಾಗಿ ಕೇಳಲಾಗದು ಎಂದಿರುವ ಸರ್ಕಾರ, ಮೃತಪಟ್ಟ 1.08 ಲಕ್ಷ ಫಲಾನುಭವಿಗಳಿಗೆ 115 ಕೋಟಿ ರೂ. ಜಮೆಯಾಗಿದ್ದನ್ನು ಒಪ್ಪಿಕೊಂಡಿದ್ದು, ಈಗಾಗಲೇ 15.24 ಕೋಟಿ ರೂ. ವಸೂಲಿ ಮಾಡಿರುವುದಾಗಿ ಹೇಳಿದೆ.

ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿರುವ ಸರ್ಕಾರ, ಯೋಜನೆಯ ಅನುಷ್ಠಾನದ ವಾಸ್ತವ ಸ್ಥಿತಿಯನ್ನು ವಿವರಿಸಿದೆ. ಈ ಎರಡು ತಿಂಗಳ ಅನುದಾನಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ, ಬಜೆಟ್ ಕೊರತೆಯಿಂದಾಗಿ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!