ಇದು ಗ್ಯಾರಂಟಿ ಸರ್ಕಾರವಲ್ಲ, ರಾಬರಿ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ!- ವಿ.ಸುನಿಲ್ ಕುಮಾರ್
ಉಡುಪಿ: ಒಂದು ಲೀಟರ್ ಹಾಲಿನ ದರವನ್ನು ₹8 ಹೆಚ್ಚಿಸಿ ವಾರ ಕಳೆಯುವ ಮೊದಲೇ ಇದೀಗ ಬಸ್ ಪ್ರಯಾಣ ದರದಲ್ಲಿ ಶೇ.23ರಿಂದ 35ರಷ್ಟು ಏರಿಕೆ ಮಾಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಸ್ ಪ್ರಯಾಣ ದರ ಏರಿಕೆಯನ್ನು ಪ್ರಶ್ನಿಸಿದರೆ, ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಲಿ, ಆಗ ನಾವು ಬಸ್ ದರ ಇಳಿಸುತ್ತೇವೆ ಎಂಬ ಮುಖ್ಯಮಂತ್ರಿಗಳ ಉತ್ತರ ಉಡಾಫೆಯಿಂದ ಕೂಡಿದೆ ಎಂದು ಅವರು ಟೀಕಿಸಿದ್ದಾರೆ.
ಪ್ರತಿಯೊಂದು ಬೆಲೆ ಏರಿಕೆಗೂ ಕೇಂದ್ರ ಸರ್ಕಾರವನ್ನು ಹೊಣೆ ಮಾಡಿ ರಾಜ್ಯ ಸರ್ಕಾರ ಕೈತೊಳೆದುಕೊಳ್ಳುವುದೇ ಆಡಳಿತದ ರೀತಿಯೇ? ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಇದೀಗ ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆಯ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯೇ ಎಂದು ಪ್ರಶ್ನಿಸಿದ್ದಾರೆ.
ಜನಸಾಮಾನ್ಯರು ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಅವರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೇರುವುದು ಸರಿಯಲ್ಲ. ಜನರಿಗೆ ಬೆಲೆ ಏರಿಕೆಯ ಬರೆ ಬೇಡ. ಕಾಂಗ್ರೆಸ್ ಸರ್ಕಾರದ ನೀತಿಗಳಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿ. ಸುನಿಲ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.





