ಉಡುಪಿ: ಜಿಲ್ಲೆಯ 8 ಉದ್ಯಮಿಗಳಿಗೆ ಕೊಲೆ ಬೆದರಿಕೆ- ಹೇಮಂತ್ ಪೂಜಾರಿ ಸಹಚರ ಸೆರೆ
ಉಡುಪಿ: ಮುದರಂಗಡಿ ಡೇವಿಡ್ ಡಿಸೋಜಾ ಕೊಲೆಯ ಬಳಿಕ ಉಡುಪಿ ಜಿಲ್ಲೆಯ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಭೂಗತ ಪಾತಕಿ ಹೇಮಂತ್ ಪೂಜಾರಿ ಎಂಬಾತನು ಪಡುಬಿದ್ರೆ, ಮಣಿಪಾಲ, ಕಾಪು ಮತ್ತು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿರುವ ಉದ್ಯಮಿಗಳನ್ನು ಗುರಿಯಾಗಿಸಿ ಕೊಂಡು ಇಂಟರ್‌ನ್ಯಾಷನಲ್ ನಂಬರ್‌ಗಳಿಂದ ಕರೆ ಮಾಡುತ್ತಿದ್ದ. ಕೋಟ್ಯಂತರ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟು, ಹಣ ನೀಡದಿದ್ದಲ್ಲಿ ಈ ಹಿಂದೆ ಶಿರ್ವದಲ್ಲಿ ಕೊಲೆಯಾದ ಡೇವಿಡ್ ಡಿಸೋಜಾ ಅವರ ರೀತಿಯಲ್ಲೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಸಂಬಂಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು.
ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಭೂಗತ ಪಾತಕಿ ಹೇಮಂತ್ ಪೂಜಾರಿಗೆ ಶ್ರೀಮಂತ ಉದ್ಯಮಿಗಳ ಮೊಬೈಲ್ ನಂಬರ್‌ಗಳನ್ನು ಒದಗಿಸಿ ಕೃತ್ಯಕ್ಕೆ ಸಹಕರಿಸಿದ್ದ ಆರೋಪದ ಮೇಲೆ ಸಾಂತೂರು ಗ್ರಾಮದ ಹರೀಶ್ ಪೂಜಾರಿ (45) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ತಾನು ಹೇಮಂತ್ ಪೂಜಾರಿಗೆ ಶಿರ್ವ ಪೊಲೀಸ್ ಠಾಣೆಯ ಪ್ರಕರಣದ ದೂರುದಾರರ ಮೊಬೈಲ್ ನಂಬರ್ ನೀಡಿ ಕೃತ್ಯಕ್ಕೆ ಸಹಕರಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನವೆಂಬರ್ 2, 2026ರಂದು ಹರೀಶ್ ಪೂಜಾರಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.





