ಉಡುಪಿ: ಮನೆ ಮಾಲೀಕನಿಗೆ ಆಸಿಡ್ ಎರಚಿ ತಲಾವಾರು ತೋರಿಸಿ ಬೆದರಿಸಿದ ಚಿನ್ನದ ಕೆಲಸಗಾರರನ ಬಂಧನ

ಉಡುಪಿ, ಅ. 29: ಇಂದ್ರಾಳಿಯ ಅಂಗಡಿ ಮಾಲೀಕರ ಮೇಲೆ ಆಸಿಡ್ ಎರಚಿ, ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕುಂಜಿಬೆಟ್ಟು ನಿವಾಸಿ ಸುರೇಶ್ ಆಚಾರ್ಯ (48) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದವರು ಶಿವಳ್ಳಿ ಗ್ರಾಮದ ನವೀನ್ ಕುಮಾರ್ (58) ಆಗಿದ್ದು, ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನವೀನ್ ಕುಮಾರ್ ಅವರು ವಿಷ್ಣುಮೂರ್ತಿ ನಗರದ ತಮ್ಮ ಮನೆಯ ಮೊದಲ ಮಹಡಿಯನ್ನು ಸುರೇಶ್ ಆಚಾರ್ಯ ಅವರಿಗೆ ಬಾಡಿಗೆಗೆ ನೀಡಿದ್ದರು. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಗೋಡೆ ಹಾಗೂ ಟ್ಯಾಪ್‌ಗಳಿಗೆ ಹಾನಿಯಾಗಿದ್ದ ಹಿನ್ನೆಲೆಯಲ್ಲಿ, ₹20 ಸಾವಿರ ಮುಂಗಡ ಹಣದಲ್ಲಿ ಎರಡು ತಿಂಗಳ ಬಾಡಿಗೆ ಮತ್ತು ದುರಸ್ತಿ ವೆಚ್ಚವನ್ನು ಕಡಿತಗೊಳಿಸುವು ದಾಗಿ ನವೀನ್ ತಿಳಿಸಿದ್ದರು ಎನ್ನಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸುರೇಶ್, ಸಂಪೂರ್ಣ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ.

ಈ ವಿಚಾರವಾಗಿ ಅ. 23ರಂದು ಅಂಗಡಿಗೆ ಬಂದು ಬೆದರಿಕೆ ಹಾಕಿದ್ದ ಆರೋಪಿ, ಅ. 28ರಂದು ಮಧ್ಯಾಹ್ನ ಸುಮಾರು 3.30ರ ವೇಳೆಗೆ ಮತ್ತೆ ಅಂಗಡಿಗೆ ತೆರಳಿ ನವೀನ್ ಕುಮಾರ್ ಅವರೊಂದಿಗೆ ಜಗಳವಾಡಿದ್ದಾನೆ. ಬಳಿಕ ಸ್ಕೂಟರ್‌ನಿಂದ ಆಸಿಡ್ ತುಂಬಿದ ಬಾಟಲಿ ಹಾಗೂ ತಲವಾರು ತಂದು ದಾಳಿ ನಡೆಸಲು ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಆಸಿಡ್ ದಾಳಿಯಿಂದ ನವೀನ್ ಕುಮಾರ್ ಅವರ ಎರಡೂ ಕೈಗಳು, ಸೊಂಟ, ಹೊಟ್ಟೆ, ಪಾದಗಳು ಹಾಗೂ ಮುಖದ ಭಾಗಗಳಿಗೆ ಸುಟ್ಟ ಗಾಯಗಳಾಗಿವೆ.

ಪ್ರಕರಣ ದಾಖಲಿಸಿಕೊಂಡ ಉಡುಪಿ ನಗರ ಪೊಲೀಸರು, ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಘಟನೆಯ ಕೆಲವೇ ಗಂಟೆಗಳಲ್ಲಿ ಶಿವಳ್ಳಿ ಗ್ರಾಮದ ಎಂಜಿಎಂ ಮೈದಾನದ ಬಳಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಕೃತ್ಯಕ್ಕೆ ಬಳಸಿದ ಬಿಳಿ ಬಣ್ಣದ ಆಕ್ಟಿವಾ ಸ್ಕೂಟರ್ ಹಾಗೂ ತಲವಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ಭರತೇಶ್ ಕಂಕಣವಾಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!