ಗರುಡ ಗ್ಯಾಂಗ್‌ನ ಸದಸ್ಯರ ಮೇಲೆ ದಾಳಿಗೆ ಸಂಚು-ಮಾರಕ ಆಯುಧಗಳೊಂದಿಗೆ ಓರ್ವನ ಬಂಧನ
ಉಡುಪಿ: ಅ. 27: ಮಣಿಪಾಲದ ವಿದ್ಯಾರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಾರಕ ಆಯುಧಗಳನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಬಂಧಿತನನ್ನು ಉಡುಪಿ ತಾಲೂಕಿನ ಕಿನ್ನಿಮುಲ್ಕಿಯ ಮಾಂಡವಿ ಪ್ಯಾರಡೈಸ್ ನಿವಾಸಿ ಮಹಮ್ಮದ್ ಪರ್ವೇಜ್ (26) ಎಂದು ಗುರುತಿಸಲಾಗಿದೆ.
ಅ. 24ರಂದು ಮಣಿಪಾಲ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಎಂ.ಇ. ಅವರು ಗಸ್ತಿನಲ್ಲಿದ್ದಾಗ ವ್ಯಕ್ತಿಯೊಬ್ಬ ಮಾರಕ ಆಯುಧಗಳೊಂದಿಗೆ ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ, ಆತನಿಂದ ನೀಲಿ ಬಣ್ಣದ ಹಿಡಿಕೆಯುಳ್ಳ ಸುಮಾರು 20 ಇಂಚು ಉದ್ದದ ಕಬ್ಬಿಣದ ಲಾಂಗ್ ಹಾಗೂ ಹಸಿರು ಬಣ್ಣದ ಹಿಡಿಕೆಯುಳ್ಳ ಸುಮಾರು 16 ಇಂಚು ಉದ್ದದ ಕಬ್ಬಿಣದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿಯ ವಿರುದ್ಧ ಉಡುಪಿ ನಗರ, ಶಿರ್ವ, ಸೆನ್ ಹಾಗೂ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ದಾವೂದ್, ಇಸಾಕ್ ಹಾಗೂ ಗರುಡ ಗ್ಯಾಂಗ್‌ನ ಕೆಲವರೊಂದಿಗೆ ವೈಮನಸ್ಸಿದ್ದು, ಅವರ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದ ಆಯುಧಗಳನ್ನು ಇಟ್ಟುಕೊಂಡಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮತಿಯಿಲ್ಲದೆ ಹಾಗೂ ಸೂಕ್ತ ಕಾರಣವಿಲ್ಲದೆ ಮಾರಕ ಆಯುಧಗಳನ್ನು ಹೊಂದಿದ್ದ ಆರೋಪದ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 175/2026ರ ಅಡಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 4 ಮತ್ತು 25(1B)(b)ರಂತೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.





