ಕೋಟೇಶ್ವರ ರೋಟರಿಗೆ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ
ಕುಂದಾಪುರ: ಪ್ರತಿಷ್ಠಿತ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ಕೋಟೇಶ್ವರವು ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವಾದ ‘ರಜತ ಪರ್ವ’ ದಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಅಂಪಾರು ಸಂಜಯ್ ಗಾಂಧಿ ಶಾಲೆಯಲ್ಲಿ ನಡೆದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಕೋಟೇಶ್ವರದ ಸದಸ್ಯರು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಕಿರು ಪ್ರಹಸನ, ಸಮೂಹ ಗೀತೆ ಹಾಗೂ ಮಹಿಳೆಯರ ವಿಭಾಗದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅಲ್ಲದೆ, ಹಿರಿಯರ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ರೋಟರಿ ಕ್ಲಬ್ ಕೋಟೇಶ್ವರಕ್ಕೆ ಚಾಂಪಿಯನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕೋಟೇಶ್ವರದ ಅಧ್ಯಕ್ಷೆ ರೊ. ಅಕ್ಷತಾ ಗಿರೀಶ್, ಕಾರ್ಯದರ್ಶಿ ರೊ. ಅರುಣಾ ದೇವಾಡಿಗ, ಆನ್ಸ್ ಕ್ಲಬ್ ಅಧ್ಯಕ್ಷೆ ಸುಜಾತಾ ಶೆಟ್ಟಿ, ರೋಟರ್ಯಾಕ್ಟ್ ಅಧ್ಯಕ್ಷ ಸತ್ಯನ್ ಕಾಂಚನ್, ಪಾಸ್ಟ್ ಅಸಿಸ್ಟೆಂಟ್ ಗವರ್ನರ್ ರೊ. ಗಜೇಂದ್ರ ಶೆಟ್ಟಿ, ರೊ. ಗಣೇಶ್ ಶೆಟ್ಟಿ, ರೊ. ಪ್ರಭಾಕರ್ ಕುಂಭಾಶಿ ಸೇರಿದಂತೆ ಕ್ಲಬ್‌ನ ಪೂರ್ವಾಧ್ಯಕ್ಷರು, ರೋಟರಿ ಹಾಗೂ ಆನ್ಸ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ತಂಡಕ್ಕೆ ಕ್ಲಬ್‌ನ ಸದಸ್ಯರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ಹಂತದಲ್ಲಿಯೂ ಉತ್ತಮ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.





