ಉಡುಪಿ: ಅ.23ರಂದು ‘ಊರೂರು ಜಂತರ್ ಮಂತರ್’ ದೇಶವ್ಯಾಪಿ ಪ್ರತಿಭಟನೆ

ಉಡುಪಿ: ಸಂವಿಧಾನಿಕ ಪ್ರಜಾಪ್ರಭುತ್ವದ ರಕ್ಷಣೆ, ಮತದಾನದ ಹಕ್ಕಿನ ಸಂರಕ್ಷಣೆ ಹಾಗೂ ಅಕ್ರಮವೆಂದು ಆರೋಪಿಸಲಾದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸುವಂತೆ ಆಗ್ರಹಿಸಿ ಅಕ್ಟೋಬರ್ 23ರಂದು ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳು, ನಾಗರಿಕ ವೇದಿಕೆಗಳು ಹಾಗೂ ರಾಜಕೀಯ ಪಕ್ಷಗಳು ಒಗ್ಗೂಡಿ ‘ಊರೂರು ಜಂತರ್ ಮಂತರ್’ ಘೋಷವಾಕ್ಯದಡಿ ಪ್ರತಿಭಟನೆಗೆ ಕರೆ ನೀಡಿವೆ ಎಂದು ಚಿಂತಕ ಪ್ರೊ. ಫಣಿರಾಜ್ ತಿಳಿಸಿದರು.

ಉಡುಪಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ವಿರುದ್ಧವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸುವ ಮೂಲಕ ಕೋಟ್ಯಂತರ ಮತದಾರರ ಮತದಾನದ ಹಕ್ಕಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

2023ರಲ್ಲಿ ಜಾರಿಗೆ ತಂದಿರುವ ಚುನಾವಣಾ ಆಯುಕ್ತರ ನೇಮಕಾತಿ ನಿಯಮಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಅವುಗಳನ್ನು ರದ್ದುಗೊಳಿಸಿ, ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ನಿಷ್ಪಕ್ಷಪಾತವನ್ನು ಖಾತರಿಪಡಿಸುವ ಹೊಸ ನಿಯಮ ರೂಪಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿವೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದ ಮಾರ್ಗದಲ್ಲಿ ಪ್ರತಿಭಟನೆ ನಡೆಸುವ ಹಕ್ಕನ್ನು ದಮನಿಸುವ ಉದ್ದೇಶದಿಂದ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಸಭೆ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಆರೋಪಿಸಿದ ಅವರು, ಈ ಕ್ರಮವನ್ನು ವಿರೋಧಿಸಿ ದೇಶದ ಪ್ರತಿಯೊಂದು ಊರಿನಲ್ಲೂ ಪ್ರತಿಭಟನೆ ನಡೆಸುವ ಉದ್ದೇಶದಿಂದ ‘ಪ್ರತಿ ಊರು ಜಂತರ್ ಮಂತರ್’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

.ಅಕ್ಟೋಬರ್ 23ರಂದು ಮಧ್ಯಾಹ್ನ 3.30ಕ್ಕೆ ಉಡುಪಿಯ ಕ್ಲಾಕ್ ಟವರ್ ಬಳಿಯ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸುವ ಮೂಲಕ ಪ್ರತಿಭಟನೆ ಆರಂಭವಾಗಲಿದೆ. ಬಳಿಕ ತ್ರಿವೇಣಿ ವೃತ್ತ, ಕೆ.ಎಂ. ಮಾರ್ಗ, ಹಳೆ ಡಯಾನ ವೃತ್ತ ಹಾಗೂ ಕೋರ್ಟ್ ರಸ್ತೆ ಮೂಲಕ ಕಾಲ್ನಡಿಗೆ ಮೆರವಣಿಗೆ ಸಾಗಲಿದೆ. ಜೋಡುಕಟ್ಟೆ ಎದುರು ಪ್ರತಿಭಟನಾ ಸಭೆ ನಡೆಯಲಿದೆ.

ವಿವಿಧ ಸಂಘಟನೆಗಳ ಸಹಭಾಗಿತ್ವ ಸಹಬಾಳ್ವೆ ಉಡುಪಿ ನೇತೃತ್ವದಲ್ಲಿ ಮುಸ್ಲಿಂ ಒಕ್ಕೂಟ ಉಡುಪಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ್, ಭಾರತೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟ, ಸಿಐಟಿಯು, ಎಸ್‌ಐಒ ಉಡುಪಿ, ಸೌಹಾರ್ದ ಕರ್ನಾಟಕ ಉಡುಪಿ ಜಿಲ್ಲೆ, ಮಾನವ ಬಂಧುತ್ವ ವೇದಿಕೆ ಉಡುಪಿ, ಡಿವೈಎಫ್‌ಐ, ಎಸ್‌ಎಫ್‌ಐ, ದಲಿತ ಹಕ್ಕುಗಳ ಸಂಘಟನೆ ಉಡುಪಿ ಜಿಲ್ಲೆ, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಉಡುಪಿ, ಅಲ್ಪಸಂಖ್ಯಾತರ ವೇದಿಕೆ, ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲೆ, ಅಂಬೇಡ್ಕರ್ ಯುವಸೇನೆ, ಸುನ್ನಿ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲೆ, ಕರ್ನಾಟಕ ಮುಸ್ಲಿಂ ಜಿಲ್ಲಾ ಜಮಾತ್ ಉಡುಪಿ ಜಿಲ್ಲೆ ಹಾಗೂ ತಬ್ಲೀಗ್ ಜಮಾತ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!