ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ಯತ್ನ- ಉದ್ಯಾವರ ನಿವಾಸಿ ಬಂಧನ
ಉಡುಪಿ, ಅ. 18: ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪ ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 85 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಕಾಪು ತಾಲೂಕು ಉದ್ಯಾವರ ಅಂಕುದ್ರು ನಿವಾಸಿ ವಿಜಯ್ ಅಲಿಯಾಸ್ ವಿಜಯ್ ಪೂಜಾರಿ (36) ಎಂದು ಗುರುತಿಸಲಾಗಿದೆ.
ಅ. 17ರಂದು ರಾತ್ರಿ 10.30ರ ಸುಮಾರಿಗೆ ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಭರತೇಶ್ ಕಂಕಣವಾಡಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪ ದಾಳಿ ನಡೆಸಲಾಯಿತು. ಈ ವೇಳೆ ಸ್ಕೂಟರ್‌ನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಆರೋಪಿಯ ಸ್ಕೂಟರ್‌ನ ಡಿಕ್ಕಿಯಲ್ಲಿ ಮಾರಾಟಕ್ಕಾಗಿ ಇರಿಸಲಾಗಿದ್ದ 17.66 ಗ್ರಾಂ ತೂಕದ ಆಂಫೆಟಮೈನ್/ಮೆಥಾಂಫೆಟಮೈನ್ ಮಾದಕ ವಸ್ತುವನ್ನು 9 ಜಿಪ್ ಕವರ್‌ಗಳಲ್ಲಿ ಪತ್ತೆಹಚ್ಚಲಾಗಿದ್ದು, ಇದರ ಅಂದಾಜು ಮೌಲ್ಯ 35 ಸಾವಿರ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಜತೆಗೆ ಮಾದಕ ವಸ್ತು ತೂಕ ಮಾಡಲು ಬಳಸುತ್ತಿದ್ದ ಯಂತ್ರ, ಏಳು ಖಾಲಿ ಜಿಪ್ ಕವರ್‌ಗಳು ಹಾಗೂ ಕಾಗದದಲ್ಲಿ ಸುತ್ತಿಡಲಾಗಿದ್ದ 2.18 ಗ್ರಾಂ ತೂಕದ ನೀಲಿ ಬಣ್ಣದ ಮಾತ್ರೆ ಮತ್ತು ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಳಿಯಿದ್ದ ವಿವೋ ವೈ16 ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 85 ಸಾವಿರ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ವಿಜಯ್ ಪೂಜಾರಿ ವಿರುದ್ಧ ಈ ಹಿಂದೆಯೂ ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಎರಡು ಪ್ರಕರಣಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಒಂದು ಪ್ರಕರಣ ಮತ್ತು ಕಾಪು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಒಂದು ಪ್ರಕರಣ ದಾಖಲಾಗಿದೆ.
ಆರೋಪಿಯು ಸೆ. 24ರಂದು ಹಿರಿಯಡ್ಕ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2026ರಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 22(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ರತ್ನಾಕರ್ ಕೆ. ತನಿಖೆ ಕೈಗೊಂಡಿದ್ದಾರೆ.
ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪಿಎಸ್ಐ ಭರತೇಶ್ ಕಂಕಣವಾಡಿ, ಪಿಎಸ್ಐ ರತ್ನಾಕರ್ ಕೆ. ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜೀವನ್ ಕುಮಾರ್, ಆನಂದ ಗಾಣಿಗ, ಪ್ರಸನ್ನ ಸಿ., ಹೇಮಂತ್ ಮತ್ತು ಓಬಳೇಶ ಆನಂದಯ್ಯ ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು





