ಶಾಸಕ ವೇದವ್ಯಾಸ ಕಾಮತ್ ಜನತೆ, ಕಾಲೇಜಿನ ಕ್ಷಮೆ ಯಾಚಿಸಲಿ: ಎ.ಸಿ. ವಿನಯರಾಜ್

ಮಂಗಳೂರು, ಅ.16: ನಗರದ ಸೈಂಟ್ ಆಗ್ನೇಸ್ ಕಾಲೇಜಿನ ಪರೀಕ್ಷಾ ವೇಳಾಪಟ್ಟಿಯಂತಹ ಶೈಕ್ಷಣಿಕ ವಿಷಯವನ್ನು ರಾಜಕೀಯ, ಧಾರ್ಮಿಕ ಸಂಘರ್ಷವನ್ನಾಗಿಸುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ಇಂತಹ ವಿಷಯಗಳನ್ನು ಪ್ರಚೋದನೆ ಮತ್ತು ಪ್ರತಿಭಟನೆಯಿಂದಲ್ಲ ಸಂವಾದದ ಮೂಲಕ ಪರಿಹರಿಸಬೇಕು. ಈ ವಿಚಾರದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಜನತೆ ಮತ್ತು ಕಾಲೇಜಿನ ಕ್ಷಮೆಕೋರಬೇಕು ಎಂದು ಕೆಪಿಸಿಸಿ ವಕ್ತಾರ ವಿನಯರಾಜ್ ಆಗ್ರಹಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಸೈಂಟ್ ಆಗ್ನೇಸ್ ಕಾಲೇಜಿನ ಪರೀಕ್ಷಾ ವಿವಾದಕ್ಕೆ ಸಂಬಂಧಿಸಿ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಕ್ಕೆ ಸಚಿವರಾದ ಯು.ಟಿ. ಖಾದರ್ ಮತ್ತು ಎಂಎಲ್ಸಿ ಐವನ್ ಡಿಸೋಜ ಕಾರಣ ಎಂದು ಹೇಳಿಕೆ ನೀಡಿರುವುದು ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ತಪ್ಪನ್ನು ಮರೆಮಾಚಲು ನಡೆಸಿದ ಬಾಲಿಶ ತಂತ್ರವಾಗಿದೆ ಎಂದು ಕೆಪಿಸಿಸಿ ವಕ್ತಾರ ವಿನಯರಾಜ್ ಹೇಳಿದ್ದಾರೆ.

ದಸರಾ ಸಂದರ್ಭದಲ್ಲಿ ಪರೀಕ್ಷೆ ನಡೆಸಿದ್ದನ್ನೇ ‘ಹಿಂದೂ ವಿರೋಧಿ ನೀತಿ ’ಎಂದು ಬಿಂಬಿಸಿ ಎಬಿವಿಪಿ ಕಾರ್ಯಕರ್ತರನ್ನು ಕಳುಹಿಸಿ ಈ ಪ್ರತಿಭಟನೆ ಮಾಡಲು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಕುಮ್ಮಕ್ಕು ನೀಡಿದ್ದಾರೆ. ನಗರದ ಕೋಮು ಸೌಹಾರ್ದತೆಗೆ ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.

‘ಮನವಿ ನೀಡಲು ಎಬಿವಿಪಿ ಕಾರ್ಯಕರ್ತರು ಕಾಲೇಜಿಗೆ ಹೋಗಿದ್ದರು’ ಎನ್ನುವ ಕಾಮತ್ ಹೇಳಿಕೆ ಸತ್ಯಕ್ಕೆ ದೂರವಾದ ವಿಚಾರ. ಬೆಳಗ್ಗೆ ಪ್ರತಿಭಟನೆ ಇದೆ. ಬನ್ನಿ ಎಂದು ಮಾಧ್ಯಮದವರಿಗೆ ಮೊದಲೇ ಮಾಹಿತಿ ನೀಡಿರುವುದು ಇದು ಪೂರ್ವಯೋಜಿತ ದಾಳಿ ಎನ್ನುವುದಕ್ಕೆ ಸಾಕ್ಷಿ ಎಂದು ನುಡಿದರು.

ಸೈಂಟ್ ಆಗ್ನೇಸ್ ಕಾಲೇಜನ್ನು ಅಲ್ಪಸಂಖ್ಯಾತ ಕ್ರೈಸ್ತ ಧರ್ಮ ಭಗಿನಿಯರು ನಡೆಸುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಈ ದಾಳಿ ನಡೆದಿದೆ. 104 ವರ್ಷಗಳಿಂದ ಯಾವುದೇ ಬೇಧಭಾವವಿಲ್ಲದೆ ವಿದ್ಯಾದಾನ ಮಾಡಿದ್ದ ಸಂಸ್ಥೆಯನ್ನು ಧಾರ್ಮಿಕ ನೆಲೆಯಲ್ಲಿ ಗುರಿಯಾಗಿಸುವುದು ಅಕ್ಷಮ್ಯ ಅಪರಾಧ ಎಂದು ಅಭಿಪ್ರಾಯಪಟ್ಟರು.

ಸರಕಾರ ಘೋಷಿಸಿದ ಎಲ್ಲಾ ಧರ್ಮಗಳ ಹಬ್ಬಗಳಿಗೆ ಮತ್ತು ಸರಕಾರ ಘೋಷಿಸದ ರಜೆಗಳನ್ನು ಕೃಷ್ಣ ಜನ್ಮಾಷ್ಟಮಿ ಮತ್ತು ನಾಗರ ಪಂಚಮಿಗೂ ಈ ಕಾಲೇಜು ರಜೆ ನೀಡುತ್ತದೆ. ಹೀಗಿರುವಾಗ ಇದು ಹಿಂದೂ ವಿರೋಧಿ’ ಹೇಗಾಗುತ್ತದೆ? ಎಲ್ಲಾ ಕಾಲೇಜುಗಳು ಸರಕಾರದ ಕಾನೂನು,ನಿಯಮ ಪಾಲಿಸಬೇಕಾಗಿದೆ, ಸ್ವಾಯತ್ತ ಕಾಲೇಜು ಸರಕಾರದ ನಿಯಮದಂತೆ ಪರೀಕ್ಷೆ ನಡೆಸಬೇಕು ಹಾಗೂ ರಜೆಗಳನ್ನು ಘೋಷಿಸಬೇಕು. 90 ದಿನ ತರಗತಿ ಬಳಿಕ ಒಂದು ವಾರ ರಿವಿಜನ್ ರಜೆ ನೀಡಿ ಪರೀಕ್ಷೆ ನಡೆಸಬೇಕು. ಡ್ರಾಫ್ಟ್ ಟೈಮ್ ಟೇಬಲ್ ಅನ್ನು ಒಂದು ತಿಂಗಳ ಮೊದಲೇ ನೋಟೀಸ್ ಬೋರ್ಡ್‌ನಲ್ಲಿ ಹಾಕಲಾಗುತ್ತದೆ. ಬದಲಾವಣೆ ಬೇಕಿದ್ದರೆ 15 ದಿನದೊಳಗೆ ರಿಜಿಸ್ಟ್ರಾರ್ (ಪರೀಕ್ಷೆ) ಅವರಿಗೆ ಲಿಖಿತ ಮನವಿ ಕೊಡಬೇಕು. ಯಾವ ವಿದ್ಯಾರ್ಥಿಯೂ, ಪ್ರಾಂಶುಪಾಲರು, ರಿಜಿಸ್ಟ್ರಾರ್ ಅಥವಾ ಆಡಳಿತ ಮಂಡಳಿಯನ್ನು ಪರೀಕ್ಷೆ ಮುಂದೂಡುವಂತೆ ಸಂಪರ್ಕಿಸಿರಲಿಲ್ಲ ಎಂದು ಆಡಳಿತ ಮಂಡಳಿ ಹೇಳಿಕೆ ನೀಡಿದೆ ಎಂದರು.

ಇತರ ಕಾಲೇಜುಗಳ ಬಗ್ಗೆ ಶಾಸಕರು ಮೌನವೇಕೆ?

ಕೆನರಾ ಕಾಲೇಜು, ಮೂಡುಬಿದಿರೆಯ ಅಳ್ವಾಸ್ ಕಾಲೇಜು, ಉಜಿರೆಯ ಎಸ್‌ಡಿಎಂ ಕಾಲೇಜು, ಪುತ್ತೂರು ವಿವೇಕಾನಂದ ಕಾಲೇಜು ಸೇರಿದಂತೆ ಆನೇಕ ಆಟೋನೋಮಸ್ ಕಾಲೇಜುಗಳಲ್ಲೂ ದಸರಾ ವೇಳೆ ಅ.12 ರಂದು ಪರೀಕ್ಷೆ ನಡೆದಿದೆ. ಅಲ್ಲಿ ಎಬಿವಿಪಿ ಪ್ರತಿಭಟನೆ ಮಾಡಲಿಲ್ಲ ಏಕೆ? ಇದು ಬಿಜೆಪಿ ಮತ್ತು ಸಂಘ ಪರಿವಾರದ ಧರ್ಮಾಧಾರಿತ ರಾಜಕಾರಣಕ್ಕೆ ಸಾಕ್ಷಿ ಎಂದರು.

ಸುಮಾರು 1800 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಬಹುಪಾಲು ಹಿಂದು ಸಮಾಜಕ್ಕೆ ಸೇರಿದವರು. ಅವರಲ್ಲಿ ಕೇವಲ 40-50 ಮಕ್ಕಳನ್ನು ಒಗ್ಗೂಡಿಸಿ ಕೋಮಸಾಮರಸ್ಯವನ್ನು ಕೆಡವಲು ಯತ್ನಿಸಲಾಗಿದೆ. ಇದರಿಂದ ಮಕ್ಕಳ ಮತ್ತು ಸಮಾಜದ ಭವಿಷ್ಯಕ್ಕೆ ಧಕ್ಕೆ ತರುವ ಈ ಅಮಾನವೀಯ ನಡೆಯು ಖಂಡನೀಯ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಗಳನ್ನು ಕೋಮು ಧ್ರುವೀಕರಣದ ಪ್ರಯೋಗಶಾಲೆ ಮಾಡಿ ರಾಜಕೀಯ ಲಾಭ ಪಡೆಯುವುದೇ ಇವರ ಹುನ್ನಾರವಾಗಿದೆ ಎಂದು ಹೇಳಿದರು.

ಅಲ್ಪಸಂಖ್ಯಾತರ ವಿದ್ಯಾಲಯಗಳನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸಿ ಮುಚ್ಚಿಸಲು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ಸಂಚು ರೂಪಿಸುತ್ತಿದೆ ಎಂಬ ಬಗ್ಗೆ ನಮಗೆ ಗಂಭೀರ ಗುಮಾನಿ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಡಿಸಿಸಿ ಉಪಾಧ್ಯಕ್ಷರಾದ ಟಿ.ಹೊನ್ನಯ್ಯ, ನೀರಜ್ ಚಂದ್ರಪಾಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಸ್.ಅಪ್ಪಿ, ಮನಪಾ ಮಾಜಿ ಸದಸ್ಯ ಅನಿಲ್ ಕುಮಾರ್, ಜಿಲ್ಲಾ ವಕ್ತಾರ ಉದಯ್ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!