ಸೌಹಾರ್ದತೆಯ ನೆಲೆಬೀಡು ಉಡುಪಿಯಲ್ಲಿ ಅಪಶ್ರುತಿ- ಮುಸ್ಲಿಂ ಯುವತಿಗೆ ಮಠದಲ್ಲಿ ವಸತಿ ನಿರಾಕರಣೆ ಸಮಾಜ ತಲೆತಗ್ಗಿಸುವ ವಿಚಾರ: ದೇವಿಪ್ರಸಾದ್ ಶೆಟ್ಟಿ ಬೆಳಪು

ಕಾಪು; ಭೇದ-ಭಾವವಿಲ್ಲದೆ ಜಗತ್ತನ್ನೇ ಕಾಯುವ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ, ಕೇವಲ ಧರ್ಮದ ಕಾರಣಕ್ಕಾಗಿ ಮುಸ್ಲಿಂ ಯುವತಿಯೊಬ್ಬಳಿಗೆ ವಸತಿ ನಿರಾಕರಿಸಿರುವ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಕೃತ್ಯವಾಗಿದೆ ಎಂದು ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಕುಟುಂಬವೊಂದರ ಜೊತೆ ಉಡುಪಿಗೆ ಆಗಮಿಸಿದ್ದ ಮುಸ್ಲಿಂ ಯುವತಿ, ಯಾವುದೇ ಅಡೆತಡೆಯಿಲ್ಲದೆ ಶ್ರೀಕೃಷ್ಣನ ದರ್ಶನ ಪಡೆದಿದ್ದಾಳೆ. ಆದರೆ, ರಾತ್ರಿ ತಂಗಲು ಮಠದ ವಸತಿಗೃಹದಲ್ಲಿ ಅವಕಾಶ ಕೇಳಿದಾಗ ಆಕೆಗೆ ಜಾಗ ನಿರಾಕರಿಸಲಾಗಿದೆ. ಇದು ಕೋಮು ಸಾಮರಸ್ಯಕ್ಕೆ ಹೆಸರಾದ ಉಡುಪಿ ಜಿಲ್ಲೆಯ ಘನತೆಗೆ ಅಂಟಿದ ಕಪ್ಪುಚುಕ್ಕೆಯಾಗಿದ್ದು, ಈ ಬಗ್ಗೆ ತಕ್ಷಣವೇ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮರೆಯಾಯಿತೇ ಪೇಜಾವರ ಶ್ರೀಗಳ ಪರಂಪರೆ?

“ವಸುಧೈವ ಕುಟುಂಬಕಂ” ಹಾಗೂ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಉದಾತ್ತ ಚಿಂತನೆಗಳೇ ಹಿಂದೂ ಧರ್ಮದ ಜೀವಾಳ. ಇದೇ ಕೃಷ್ಣಮಠದಲ್ಲಿ ಹಿರಿಯ ಪೇಜಾವರ ಶ್ರೀಗಳು ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಭಾವೈಕ್ಯತೆಯ ಬಹುದೊಡ್ಡ ಸಂದೇಶ ಸಾರಿದ್ದರು. ತಮ್ಮ ವಾಹನಕ್ಕೆ ಮುಸ್ಲಿಂ ಚಾಲಕನನ್ನು ಹೊಂದಿದ್ದ ಅವರು ಸರ್ವಧರ್ಮ ಸಮನ್ವಯದ ನಿಜವಾದ ಪ್ರತಿಪಾದಕರಾಗಿದ್ದರು. ಆದರೆ ಸಮಾಜಕ್ಕೆ ಮಾರ್ಗ ದರ್ಶನ ನೀಡಬೇಕಾದ ಅಷ್ಟಮಠಗಳಲ್ಲೇ ಇಂತಹ ತಾರತಮ್ಯ ನಡೆದಿರುವುದು ಅತ್ಯಂತ ಖೇದಕರ ಎಂದಿದ್ದಾರೆ.

ಹಾಜಿ ಅಬ್ದುಲ್ಲಾರ ಕೊಡುಗೆ ಮರೆತರೇ?

ಕೃಷ್ಣಮಠಕ್ಕೂ ಮುಸ್ಲಿಂ ಬಾಂಧವರಿಗೂ ಇರುವ ನಂಟು ಇಂದಿನದ್ದಲ್ಲ. ಅಂದು ಮಠದಲ್ಲಿ ದೀಪ ಬೆಳಗಿಸಲೂ ಎಣ್ಣೆ ಇಲ್ಲದಂತಹ ಕಷ್ಟಕಾಲವಿದ್ದಾಗ, ದಾನಿ ಹಾಜಿ ಅಬ್ದುಲ್ಲಾ ಅವರು ಮಠಕ್ಕೆ ಅಪಾರ ನೆರವು ನೀಡಿದ್ದರು. ಇಂದಿಗೂ ಮಠದ ತಾಮ್ರದ ಪಾತ್ರೆಗಳನ್ನು ಶುಚಿಗೊಳಿಸುವ ಕಾಯಕವನ್ನು ಮುಸ್ಲಿಂ ಕುಟುಂಬವೊಂದು ಶ್ರದ್ಧೆಯಿಂದ ಮಾಡಿ ಕೊಂಡು ಬರುತ್ತಿರುವುದು ಇಲ್ಲಿನ ಸೌಹಾರ್ದ ಇತಿಹಾಸಕ್ಕೆ ಸಾಕ್ಷಿ.

ಇಂತಹ ಭವ್ಯ ಪರಂಪರೆಯಿರುವ ಕೃಷ್ಣಮಠದಲ್ಲಿ ನಡೆದಿರುವ ಈ ಘಟನೆ, ಕೇವಲ ಆ ಯುವತಿಗಾದ ಅಪಮಾನವಲ್ಲ; ಬದಲಾಗಿ ಭಕ್ತರ ಕಷ್ಟ ನೀಗಿಸುವ ದೇವರಿಗೂ ಹಾಗೂ ಸಮಸ್ತ ಸಮಾಜಕ್ಕೂ ಆದ ಅಪಚಾರ. ಇದು ತೀರಾ ಖಂಡನೀಯ ಎಂದು ಡಾ. ದೇವಿಪ್ರಸಾದ್ ಶೆಟ್ಟಿ ವಿಷಾದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!