ಬಡಗಬೆಟ್ಟು ಕ್ರೆಡಿಟ್ ಕೋ-ಆ. ಸೊಸೈಟಿ- ಜಿಲ್ಲಾ ಮಟ್ಟದ ಸಹಕಾರ ತರಬೇತಿ ಕಾರ್ಯಕ್ರಮ
ಉಡುಪಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಉಡುಪಿ ಹಾಗೂ ಸಹಕಾರ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಹಕಾರ ತರಬೇತಿ ಕಾರ್ಯಕ್ರಮವು ಶುಕ್ರವಾರ ಉಡುಪಿಯ ಹೋಟೆಲ್ ಸ್ವದೇಶ್ ಹೆರಿಟೇಜ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ. ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಸ್ಥೆಗಳ ಯಶಸ್ಸಿನಲ್ಲಿ ವೃತ್ತಿಪರತೆ, ಪಾರದರ್ಶಕ ಆಡಳಿತ, ಆಧುನಿಕ ನಿರ್ವಹಣಾ ಕೌಶಲ್ಯ ಹಾಗೂ ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆಯು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಸಹಕಾರ ಸಂಸ್ಥೆಗಳು ತಂತ್ರಜ್ಞಾನ ಮತ್ತು ಜ್ಞಾನಾಧಾರಿತ ಕಾರ್ಯವೈಖರಿಯನ್ನು ಅಳವಡಿಸಿಕೊಂಡು ಸದಸ್ಯ ಕೇಂದ್ರಿತ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸಬೇಕೆಂದು ಅವರು ಕರೆ ನೀಡಿದರು.
ತರಬೇತುದಾರರಾಗಿ ಭಾಗವಹಿಸಿದ್ದ ಶಿವಮೊಗ್ಗದ ಸನ್ನದು ಲೆಕ್ಕಪರಿಶೋಧಕ ವರುಣ್ ಭಟ್ ಅವರು “ಸಹಕಾರಿಗಳಲ್ಲಿ ವೃತ್ತಿಪರತೆ ಮತ್ತು ವ್ಯವಹಾರಗಳ ಅಭಿವೃದ್ಧಿಗಾಗಿ ಅದರ ಬಳಕೆ” ಹಾಗೂ “ಮಾನವ ಸಂಪನ್ಮೂಲಗಳು, ಅವುಗಳ ಬಳಕೆ ಹಾಗೂ ಅಭಿವೃದ್ಧಿ” ಎಂಬ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿ, ಸಂಸ್ಥೆಗಳ ಬೆಳವಣಿಗೆಯಲ್ಲಿ ವೃತ್ತಿಪರ ನಿರ್ವಹಣೆ ಮತ್ತು ಸಿಬ್ಬಂದಿಯ ಕೌಶಲ್ಯಾಭಿವೃದ್ಧಿಯ ಮಹತ್ವವನ್ನು ವಿವರಿಸಿದರು.
ಗಾಂಧಿ ಜಯಂತಿಯ ಅಂಗವಾಗಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಖಾದಿ ನೂಲಿನ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಯಕರ ಶೆಟ್ಟಿ ಇಂದ್ರಾಳಿ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನಾದರ್ಶಗಳನ್ನು ಸ್ಮರಿಸಿ, ಸತ್ಯ, ಸರಳತೆ, ಸ್ವಾವಲಂಬನೆ, ಶಿಸ್ತು ಮತ್ತು ಸಮಾಜಮುಖಿ ಚಿಂತನೆಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ತಿಳಿಸಿದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಲೆಕ್ಕಿಗರಾದ ಅಶ್ವಿನಿ ಕುಮಾರ್ ಎಮ್, ಆಡಳಿತ ಮಂಡಳಿಯ ನಿರ್ದೇಶಕರಾದ ಸಾಧು ಸಾಲ್ಯಾನ್, ಎಲ್. ಉಮಾನಾಥ್, ಜಯಾ ಶೆಟ್ಟಿ ಹಾಗೂ ಸದಾಶಿವ ನಾಯ್ಕ್ ಉಪಸ್ಥಿತರಿದ್ದರು.
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಲ್ಪೆ ಶಾಖೆಯ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರೆ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ವಂದಿಸಿದರು.





