ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದ ಸಂಶೋಧನೆಗೆ ಆದ್ಯತೆ ಅಗತ್ಯ

ಉಡುಪಿ, ಸೆ.30: ಆಟೋಇಮ್ಯೂನ್ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಸಂಶೋಧನೆ ಹಾಗೂ ಜಾಗತಿಕ ಆರೋಗ್ಯ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಅಗತ್ಯವಿದೆ ಎಂದು ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಅಧ್ಯಕ್ಷೆ ಪ್ರೊ. (ಡಾ.) ಮನಿಷಾ ಉಪೇಂದ್ರ ಕೊಥೇಕರ್ ಹೇಳಿದರು.

ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಉಡುಪಿ ಆಯೋಜಿಸಿರುವ ‘ಕ್ಷಮತ್ವಂ–2026’ ಆರನೇ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಬುಧವಾರ ಭಾವಪ್ರಕಾಶ ಸಭಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಎಸ್‌ಡಿಎಂ ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಪ್ರೊ. ಡಾ. ಪ್ರಸನ್ನ ಎನ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಭಾರತ ಸರ್ಕಾರದ ಆಯುಷ್ ಸಚಿವಾಲಯದ ಆಯುರ್ವೇದ ಸಲಹೆಗಾರ ಡಾ. ಕೌಸ್ತುಭ್ ಉಪಾಧ್ಯಾಯ, ಕರ್ನಾಟಕ ಆಯುಷ್ ಇಲಾಖೆಯ ಆಯುಕ್ತ ಡಾ. ಸುನಿಲ್ ಪನ್ವಾರ್, ಆಯುರ್ವೇದ ರಷ್ಯಾ–ಇಂಡಿಯಾ ಅಸೋಸಿಯೇಷನ್ ಅಧ್ಯಕ್ಷೆ ಡಾ. ಅನಿತಾ ಕರಿಲಿಯೊ ಅರ್ಕಾಸ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಮುಖ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪರಮಪೂಜ್ಯ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸಂದೇಶವನ್ನು ವಾಚಿಸಲಾಯಿತು.

ಸಮ್ಮೇಳನದಲ್ಲಿ ‘ಪಂಚಕರ್ಮ ಶ್ಲೋಕ ಮಂಜರಿ’ ಹಾಗೂ ‘English Translation of Sushruta Samhita – Part 1’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಪ್ರೊಫೆಸರ್ ಎಮೆರಿಟಸ್ ಡಾ. ಶ್ರೀನಿವಾಸ್ ಹೆಜಮಾಡಿ ಮುಖ್ಯ ಭಾಷಣ ಮಾಡಿದರು.

ನಂತರ ನಡೆದ ವೈಜ್ಞಾನಿಕ ಗೋಷ್ಠಿಗಳಲ್ಲಿ ದೇಶ-ವಿದೇಶಗಳ ತಜ್ಞರು ಆಟೋಇಮ್ಯೂನ್ ಕಾಯಿಲೆಗಳು, ರೋಗನಿರೋಧಕ ವ್ಯವಸ್ಥೆ ಹಾಗೂ ಆಯುರ್ವೇದ ಸಂಶೋಧನೆಯ ಸಾಧ್ಯತೆಗಳ ಕುರಿತು ವಿಚಾರ ಮಂಡಿಸಿದರು. ಸಂಶೋಧಕರು ತಮ್ಮ ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಿದರು.

ಎಸ್‌ಡಿಎಂ ಕಲಾವೈಭವ ತಂಡದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಎಸ್‌ಡಿಎಂ ಆಯುರ್ವೇದ ಸಂಸ್ಥೆಗಳ ಮುಖ್ಯಸ್ಥರು, ವೈದ್ಯರು, ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ದೇಶ-ವಿದೇಶಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!