ಉಡುಪಿ: ಫಿಟ್ನೆಸ್ ಇಲ್ಲದ, ತೆರಿಗೆ ಪಾವತಿಸದ ಸಿಟಿಬಸ್ ಮುಟ್ಟುಗೋಲು!

ಉಡುಪಿ: ನಗರದಿಂದ ತೊಟ್ಟಂ–ಹೂಡೆ–ಮಲ್ಪೆ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಸಿಟಿಬಸ್‌ವೊಂದರ ವಿರುದ್ಧ ಗಂಭೀರ ನಿಯಮ ಉಲ್ಲಂಘನೆಗಳ ಆರೋಪ ಕೇಳಿಬಂದಿದ್ದು, ಆರ್‌ಟಿಒ ದಾಖಲೆಗಳು ಹಲವು ಅಂಶಗಳನ್ನು ಬಹಿರಂಗಪಡಿಸಿವೆ.

ವಾಹನದ ಆರ್‌ಟಿಒ ದಾಖಲೆಯ ಪ್ರಕಾರ, ಬಸ್‌ 1 ಏಪ್ರಿಲ್ 2011ರಂದು ನೋಂದಣಿಯಾಗಿದ್ದು, 15 ವರ್ಷಕ್ಕೂ ಹೆಚ್ಚು ಹಳೆಯದಾಗಿದೆ. ವಾಹನದ ಫಿಟ್ನೆಸ್ ಪ್ರಮಾಣಪತ್ರದ ಅವಧಿ 27 ಮೇ 2025ರಂದೇ ಮುಕ್ತಾಯಗೊಂಡಿದೆ. ಮೋಟಾರು ವಾಹನ ತೆರಿಗೆ ಪಾವತಿಯ ಅವಧಿ 30 ಜೂನ್ 2024ರಂದೇ ಮೀರಿದೆ ಎಂದು ದಾಖಲೆ ಸೂಚಿಸುತ್ತದೆ.

ಇದರ ಜೊತೆಗೆ, ವಾಹನದ ಪರವಾನಗಿ (Permit) ಕುರಿತ ದಾಖಲೆಗಳಲ್ಲೂ ಗಂಭೀರ ವ್ಯತ್ಯಾಸ ಕಂಡುಬರುತ್ತಿದ್ದು, ಪರವಾನಗಿ ಅವಧಿ 28 ಫೆಬ್ರವರಿ 1998ರಲ್ಲೇ ಮುಕ್ತಾಯಗೊಂಡಿದೆ ಎಂದು ದಾಖಲೆ ತೋರಿಸುತ್ತಿದೆ.

ಇಷ್ಟೇ ಅಲ್ಲದೆ, ಆರ್‌ಟಿಒ ದಾಖಲೆಯಲ್ಲಿ ವಾಹನದ ಸ್ಥಿತಿಯನ್ನು “Fitness Expired” ಎಂದು ನಮೂದಿಸಲಾಗಿದೆ. ಮತ್ತಷ್ಟು ಗಮನಾರ್ಹವಾಗಿ, 24 ನವೆಂಬರ್ 2025ರಿಂದ ಉಡುಪಿ ಆರ್‌ಟಿಒ ಲಾಕ್ ಮಾಡಿರುವ ವಾಹನ ಎಂಬ ದಾಖಲೆಯೂ ಇದೆ.

ವಾಹನದ ವಿಮೆ ಮಾತ್ರ 23 ನವೆಂಬರ್ 2026ರವರೆಗೆ ಹಾಗೂ PUCC ಪ್ರಮಾಣಪತ್ರ 23 ಮಾರ್ಚ್ 2027ರವರೆಗೆ ಮಾನ್ಯವಾಗಿರುವುದಾಗಿ ದಾಖಲೆ ತಿಳಿಸುತ್ತದೆ.

ಆರ್‌ಟಿಓ ಲಾಕ್ ಮಾಡಿದ ವಾಹನ ಮತ್ತೆ ರಸ್ತೆಗೆ?

ಫಿಟ್ನೆಸ್ ಅವಧಿ ಮುಕ್ತಾಯ, ತೆರಿಗೆ ಬಾಕಿ, ಪರವಾನಗಿ ಕುರಿತ ದಾಖಲೆಗಳಲ್ಲಿನ ಸಮಸ್ಯೆಗಳು ಹಾಗೂ ಆರ್‌ಟಿಒ ದಾಖಲೆಯಲ್ಲೇ ವಾಹನವನ್ನು “Locked” ಎಂದು ನಮೂದಿಸಿರುವ ಹಿನ್ನೆಲೆಯಲ್ಲಿ, ಇಂತಹ ವಾಹನ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಸಂಚರಿಸುತ್ತಿದೆಯೇ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಸ್ಥಳೀಯರ ಆರೋಪದ ಪ್ರಕಾರ, ವಾಹನದ ವಿರುದ್ಧ ಇಷ್ಟೊಂದು ನಿಯಮ ಉಲ್ಲಂಘನೆಗಳ ದಾಖಲೆಗಳಿದ್ದರೂ, ಅದು ಮತ್ತೆ ಪ್ರಯಾಣಿಕರ ಸೇವೆಗೆ ಇಳಿದಿದ್ದರೆ ಸಾರಿಗೆ ಇಲಾಖೆ ಇದನ್ನು ಹೇಗೆ ಅನುಮತಿಸಿತು? ಎಂಬ ಪ್ರಶ್ನೆಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.

ಮುಟ್ಟುಗೋಲು ಹಾಕಿದ ಮರುದಿನವೇ ರಸ್ತೆಗಿಳಿದಿತೇ?

ಬಸ್‌ನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರೂ, ಮರುದಿನವೇ ಪ್ರಯಾಣಿಕರ ಸೇವೆಗೆ ಇಳಿದಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪ ನಿಜವೇ ಎಂಬುದನ್ನು ಸಾರಿಗೆ ಇಲಾಖೆ ಪರಿಶೀಲಿಸಬೇಕಿದೆ.

ಕಳೆದ ಎರಡು ವರ್ಷಗಳಿಂದ ತೆರಿಗೆ ಪಾವತಿಸದೆ ಹಾಗೂ ಫಿಟ್ನೆಸ್ ಸೇರಿದಂತೆ ಅಗತ್ಯ ದಾಖಲೆಗಳ ಸಮಸ್ಯೆಯೊಂದಿಗೆ ಬಸ್ ಸಂಚರಿಸುತ್ತಿದ್ದರೆ, ಈ ಅವಧಿಯಲ್ಲಿ ನಿಯಮಿತ ತಪಾಸಣೆ ನಡೆಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೇ ಎಂಬ ಪ್ರಶ್ನೆಯೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಅಧಿಕಾರಿಗಳ ಕರ್ತವ್ಯಲೋಪದ ಆರೋಪ

“ನಿಯಮ ಉಲ್ಲಂಘನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದೆ ಇರುವುದಕ್ಕೆ ಕಾರಣವೇನು?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೆಲವರು ಅಧಿಕಾರಿಗಳ ಕರ್ತವ್ಯಲೋಪ ಅಥವಾ ಯಾವುದೇ ಅಕ್ರಮ ಹೊಂದಾಣಿಕೆ ನಡೆದಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ತನಿಖೆಗೆ ಆಗ್ರಹ

ಆರ್‌ಟಿಒ ದಾಖಲೆಗಳಲ್ಲಿ “Fitness Expired” ಹಾಗೂ “Locked” ಎಂದು ನಮೂದಾಗಿರುವ ವಾಹನವು ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸುತ್ತಿದ್ದರೆ, ಅದರ ವಿರುದ್ಧ ಯಾರು ಕ್ರಮ ಕೈಗೊಂಡರು? ಮುಟ್ಟುಗೋಲು ನಂತರ ವಾಹನ ಮತ್ತೆ ರಸ್ತೆಗೆ ಇಳಿದಿದ್ದರೆ ಅದಕ್ಕೆ ಅವಕಾಶ ನೀಡಿದವರು ಯಾರು? ಕಳೆದ ಎರಡು ವರ್ಷಗಳ ತೆರಿಗೆ ಬಾಕಿ ಹಾಗೂ ಇತರ ದಾಖಲೆಗಳ ಬಗ್ಗೆ ಇಲಾಖೆ ಯಾವ ಕ್ರಮ ಕೈಗೊಂಡಿದೆ? ಎಂಬ ಪ್ರಶ್ನೆಗಳಿಗೆ ಉಡುಪಿ ಆರ್‌ಟಿಒ ಹಾಗೂ ಸಾರಿಗೆ ಇಲಾಖೆ ಸ್ಪಷ್ಟ ಉತ್ತರ ನೀಡಬೇಕಿದೆ.

ಉಡುಪಿಯ ಇತರ ಖಾಸಗಿ ಬಸ್ ಮಾಲಕರು ಈ ಬಸ್ ನಿರಂತರ ಕಾನೂನು ಮೀರಿ ಸಂಚರಿಸುವ ಬಗ್ಗೆ ಆರ್‌ಟಿಓ ಹಾಗೂ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ. ಇದೇ ರೀತಿ ನಿಯಮ ಮೀರಿ ಇವರ ಹಲವು ಬಸ್ ನಗರದಲ್ಲಿ ಸಂಚರಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ, ಬಸ್ ನಿಜವಾಗಿಯೂ ಸಂಚರಿಸುತ್ತಿದೆಯೇ, ದಾಖಲೆಗಳ ಸ್ಥಿತಿ ಏನು ಮತ್ತು ನಿಯಮ ಉಲ್ಲಂಘನೆಯಾಗಿದ್ದರೆ ಇದುವರೆಗೆ ಏಕೆ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ.

Leave a Reply

Your email address will not be published. Required fields are marked *

error: Content is protected !!