ತುಳು ಭಾಷಾ ಮಾನ್ಯತೆ ಸಂಭ್ರಮ: ಅ.4ರಂದು ‘ವಿಶೇಷ ತುಳುವೆರೆ ದಿಬ್ಬಣ’- ಜಯಕರ್ ಶೆಟ್ಟಿ ಇಂದ್ರಾಳಿ
ಉಡುಪಿ: ತುಳು ಭಾಷೆಗೆ ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ತುಳುಕೂಟ ಉಡುಪಿ ವತಿಯಿಂದ ಅ.4ರಂದು ನಗರದಲ್ಲಿ ‘ವಿಶೇಷ ತುಳುವೆರೆ ದಿಬ್ಬಣ’ ಹಾಗೂ ಗೌಜಿ-ಮಿನದನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತುಳುಕೂಟದ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 3 ಗಂಟೆಗೆ ಕುಂಜಿಬೆಟ್ಟು ರಿಕ್ಷಾ ನಿಲ್ದಾಣದಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದವರೆಗೆ ತುಳುಕೂಟದ ಸದಸ್ಯರು ಹಾಗೂ ವಿವಿಧ ತುಳು ಸಂಘಟನೆಗಳ ಸಹಯೋಗದಲ್ಲಿ ತುಳುವೆರೆ ದಿಬ್ಬಣ ನಡೆಯಲಿದೆ. ಸಂಜೆ 4 ಗಂಟೆಗೆ ಐವೈಸಿ ಸಭಾಂಗಣದಲ್ಲಿ ತುಳು ಭಾಷಾ ಮಾನ್ಯತೆ ಸಂಭ್ರಮ ಹಾಗೂ ವಿಶ್ವಪ್ರಭಾ ಪ್ರಯೋಜಿತ 31ನೇ ವರ್ಷದ ಎಸ್.ಯು. ಪಣಿಯಾಡಿ ನೆನಪಿನ ತುಳು ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ತುಳು ಭಾಷೆಗೆ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ತುಳುಕೂಟ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕೃತ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ರಮದ ಮೂಲಕ ತುಳುವರ ಸಂಭ್ರಮವನ್ನು ವ್ಯಕ್ತಪಡಿಸಲಾಗುತ್ತಿದೆ. ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸುವ ಪ್ರಕ್ರಿಯೆಯಲ್ಲಿ ಹೋರಾಟ ನಡೆಸಿದ ಅಖಿಲ ಭಾರತ ತುಳು ಒಕ್ಕೂಟ, ಮಂಗಳೂರು ಇದರ ಅಧ್ಯಕ್ಷ ಎ.ಸಿ. ಭಂಡಾರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಜಯಕರ್ ಶೆಟ್ಟಿ ಇಂದ್ರಾಳಿ ವಹಿಸಲಿದ್ದು, ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಹಾಗೂ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತುಳು ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ:
ತುಳುಕೂಟ ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಶ್ವಪ್ರಭಾ ಪ್ರಾಯೋಜಿತ ಎಸ್.ಯು. ಪಣಿಯಾಡಿ ನೆನಪಿನ ಕಾದಂಬರಿ ಪ್ರಶಸ್ತಿ ಪ್ರದಾನವೂ ಅ.4ರಂದು ಸಂಜೆ 4 ಗಂಟೆಗೆ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ.
2025ನೇ ಸಾಲಿನ ಪಣಿಯಾಡಿ ಕಾದಂಬರಿ ಪ್ರಶಸ್ತಿಗೆ ಪುತ್ತೂರಿನ ಉಪತಹಶೀಲ್ದಾರ್ ಸುಲೋಚನಾ ಪಿ.ಕೆ. ಅವರ ‘ದಧೂಟಿ ಬನ’ ಕಾದಂಬರಿ ಆಯ್ಕೆಯಾಗಿದ್ದು, ಅವರಿಗೆ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಕೃತಿಯ ಪರಿಚಯವನ್ನು ಸಾಹಿತಿ ವಾಸಂತಿ ಅಂಬಪಾಡಿ ಮಾಡಲಿದ್ದಾರೆ.
ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಬರೋಡಾ ಶಶಿಧರ ಶೆಟ್ಟಿ, ತುಳು ಸಂಘ ಬರೋಡಾದ ಗೌರವಾಧ್ಯಕ್ಷ ದಯಾನಂದ ಬೋಂಟ್ರ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಸಮಾಜ ಸೇವಕ ಹಾಗೂ ಪ್ರಶಸ್ತಿ ಪ್ರಾಯೋಜಕ ಉಡುಪಿ ವಿಶ್ವನಾಥ ಶೆಣೈ, ಯುವ ಉದ್ಯಮಿ ಹಾಗೂ ಉಡುಪಿ ಹೃದಯಂ ಫೌಂಡೇಶನ್‌ನ ಪ್ರವರ್ತಕ ಸುಭಾಷ್ ಸಾಲ್ಯಾನ್ ನೆಲ್ಲಿಕಟ್ಟೆ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಭುವನ ಪ್ರಸಾದ್ ಹೆಗ್ಡೆ, ಡಾ. ವಿ.ಕೆ. ಯಾದವ್, ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಕೋಶಾಧಿಕಾರಿ ಎಂ.ಜಿ. ಚೈತನ್ಯ, ಪಣಿಯಾಡಿ ಪ್ರಶಸ್ತಿ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ, ತುಳುವೆರೆ ದಿಬ್ಬಣ ಸಂಚಾಲಕ ದಿವಾಕರ್ ಸನಿಲ್, ಮಾಧ್ಯಮ ಸಂಚಾಲಕಿ ಯಶೋಧ ಕೇಶವ್ ಹಾಗೂ ನಾಟಕ ಪರ್ಬ ಸಂಚಾಲಕ ಬಿ. ಪ್ರಭಾಕರ್ ಭಂಡಾರಿ ಉಪಸ್ಥಿತರಿದ್ದರು.





