ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ


ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ನಮ್ಮ ಕರ್ನಾಟಕ ಸೇನೆಯಿಂದ ಮನವಿ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಉಡುಪಿ ಜಿಲ್ಲೆಯಲ್ಲಿ ಇತ್ತೀಚಿನ ಹಲವು ಘಟನೆಗಳಿಗೆ ಮಾದಕ ದ್ರವ್ಯ ಸೇವನೆಯೂ ಕಾರಣವಾಗಿರಬಹುದು ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಗುಪ್ತವಾಗಿ ಮಾದಕ ದ್ರವ್ಯಗಳ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳು ಹಾಗೂ ಅನುಮಾನಗಳಿದ್ದು, ಈ ಬಗ್ಗೆ ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು ಎಂದು ಸಂಘಟನೆ ಮನವಿಯಲ್ಲಿ ತಿಳಿಸಿದೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟ ಮತ್ತು ಸಾಗಾಟದ ಬಗ್ಗೆ ಮಾಹಿತಿ ಸಂಗ್ರಹಿಸಲು ಸ್ಥಳೀಯ ಮಟ್ಟದಲ್ಲಿ ಗುಪ್ತ ಮಾಹಿತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಜನಸಾಮಾನ್ಯರ ಸಹಕಾರದೊಂದಿಗೆ ಮಾದಕ ದ್ರವ್ಯ ಮಾರಾಟಗಾರರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಮಾದಕ ದ್ರವ್ಯದ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಲಾಗಿದೆ.

ಮಾದಕ ದ್ರವ್ಯದ ದುಶ್ಚಟದಿಂದ ಯುವಜನರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬಲ್ಲ ವ್ಯಕ್ತಿಗಳು ತಮ್ಮ ಭವಿಷ್ಯವನ್ನು ಕಳೆದುಕೊಳ್ಳುವ ಅಪಾಯವಿದೆ. ವೈದ್ಯರು, ಉನ್ನತ ಶಿಕ್ಷಣ ಪಡೆದವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಪಡೆದವರೂ ಇಂತಹ ದುಶ್ಚಟಗಳಿಗೆ ಬಲಿಯಾಗದಂತೆ ಜಾಗೃತಿ ಹಾಗೂ ಕಾನೂನು ಕ್ರಮ ಎರಡಕ್ಕೂ ಆದ್ಯತೆ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಮಾದಕ ದ್ರವ್ಯಗಳ ಮಾರಾಟ, ಸಾಗಾಟ ಹಾಗೂ ಬಳಕೆಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಪರಿಣಾಮಕಾರಿ ಕಾರ್ಯಾಚರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಮ್ಮ ಕರ್ನಾಟಕ ಸೇನೆ ಮನವಿ ಮಾಡಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸುಜಯ್ ಪೂಜಾರಿ, ಜಿಲ್ಲಾ ಗೌರವಾಧ್ಯಕ್ಷ ಲಕ್ಷ್ಮೀಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಆನಂದ್ ಶೆಟ್ಟಿ, ಜಿಲ್ಲಾ ಗೌರವ ಸಲಹೆಗಾರ ಪ್ರಕಾಶ್ ದೇವಾಡಿಗ, ತೇಜಸ್ ರಾವ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಸುಬ್ಬಣ್ಣ ಕಾಮತ್, ಜಿಲ್ಲಾ ಕಾರ್ಮಿಕರ ಅಧ್ಯಕ್ಷ ಸಿದ್ದಣ್ಣ ಎಸ್. ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಸರ್ವೋತ್ತಮ, ಜಿಲ್ಲಾ ಸಂಸ್ಕೃತ ಕಾರ್ಯದರ್ಶಿ ಗಣೇಶ್ ಆಚಾರ್ಯ, ಜಿಲ್ಲಾ ಸದಸ್ಯರಾದ ಅನಿಲ್ ಹಾಗೂ ಸುಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!