ಉಡುಪಿ ಗಣೇಶೋತ್ಸವ ಸಮಿತಿಯ ವಜ್ರ ಮಹೋತ್ಸವ: 25 ವಿದ್ಯಾರ್ಥಿಗಳಿಗೆ ಧನಸಹಾಯ

ಉಡುಪಿ: ಮಾನವ ಸಂಸಾರಮುಖಿಯಾಗಿ ಬದುಕದೆ ಸಮಾಜಮುಖಿಯಾಗಿ ಜೀವಿಸಿ ಸಮಾಜದ ಋಣ ತೀರಿಸಬೇಕು. ಹಿಂದೂಸ್ಥಾನವು ಜಗತ್ತಿನಲ್ಲಿಯೇ ಶ್ರೇಷ್ಠ ಆಧ್ಯಾತ್ಮಿಕ ರಾಷ್ಟ್ರವಾಗಿದ್ದು, ಹಬ್ಬಗಳು ಈ ನಾಡಿನ ಅಸ್ಮಿತೆಯಾಗಿದೆ. ನಮ್ಮ ಪರಂಪರೆಯು ದಿವ್ಯತೆ, ಭವ್ಯತೆ ಹೊಂದಿದೆ. ದುರಿತಗಳು ಶ್ರೀರಾಮಚಂದ್ರ, ಸತ್ಯಹರಿಶ್ಚಂದ್ರರನ್ನೂ ಬಿಡಲಿಲ್ಲ. ಆದರೆ ಭಗವಂತನ ಹಾಗೂ ವಿಘ್ನನಿವಾರಕನಾದ ಗಣೇಶನ ಅನುಗ್ರಹವಿದ್ದರೆ ಸಕಲ ಕಷ್ಟಗಳೂ ಕರಗಿಹೋಗುತ್ತವೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಅಭಿಪ್ರಾಯಪಟ್ಟರು.

ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇಗುಲದ ಹೊರಾಂಗಣದಲ್ಲಿ ಗುಜ್ಜಾಡಿ ನರಸಿಂಹ ನಾಯಕ್​ ವೇದಿಕೆಯಲ್ಲಿ ಉಡುಪಿ ಗಣೇಶೋತ್ಸವ ಸಮಿತಿಯ 60ನೇ ವರ್ಷದ ಹಾಗೂ ವಜ್ರ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ಆಯೋಜಿಸಿದ್ದ ಧಾರ್ಮಿಕ ಸಭೆ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಹೋಟೆಲ್​ ಉದ್ಯಮಿ ನಾಗೇಶ್​ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆ ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಗಣೇಶೋತ್ಸವದ ಮೂಲಕವೂ ಉಡುಪಿ ಕಡಿಯಾಳಿಯ ಸಮಿತಿಯು ಸಮಾಜ ಸೇವೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.

ಸಮಿತಿಯ ಗೌರವಾಧ್ಯಕ್ಷ, ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ವಾರಗಳ ಕಾಲ ಯಶಸ್ವಿಯಾಗಿ ಗಣೇಶೋತ್ಸವ ಆಯೋಜಿಸಿದ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡ ಎಲ್ಲ ಭಗವದ್ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಅನಾಥರ ಶಿಕ್ಷಣಕ್ಕೆ ಆರ್ಥಿಕ ಸಹಕಾರ: ಕರೊನಾ ಸಂದರ್ಭದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳನ್ನು ದತ್ತು ಪಡೆದು ಅವರ ಸಂಪೂರ್ಣ ಶಿಕ್ಷಣಕ್ಕೆ ಸಹಕರಿಸುತ್ತಿರುವ ಆಸರೆ ಚಾರಿಟೇಬಲ್​ ಟ್ರಸ್ಟ್​ ವತಿಯಿಂದ 25 ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಲಾಯಿತು.

ಸಮಿತಿಯ ಅಧ್ಯಕ್ಷ ಪ. ವಸಂತ ಭಟ್​ ಅಧ್ಯಕ್ಷತೆ ವಹಿಸಿದ್ದರು. ವಜ್ರ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಕಟ್ಟೆ ರವಿರಾಜ್​ ಆಚಾರ್ಯ, ಮತ್ಸ್ಯೋದ್ಯಮಿ ಆನಂದ್​ ಸುವರ್ಣ ಮಲ್ಪೆ, ಆಭರಣ ಜ್ಯುವೆಲ್ಲರ್ಸ್​ ಬೆಂಗಳೂರಿನ ಆಡಳಿತ ನಿರ್ದೇಶಕ ಡಾ. ಪ್ರತಾಪ್​ ಮಧುಕರ್​ ಕಾಮತ್​, ವಜ್ರ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಕೆ.ಮಂಜುನಾಥ್​ ಹೆಬ್ಬಾರ್​, ಆಸರೆ ಚಾರಿಟೇಬಲ್​ ಟ್ರಸ್ಟ್​ನ ಅಧ್ಯಕ್ಷ ಎಂ.ವಲ್ಲಭ ಭಟ್​ ಉಪಸ್ಥಿತರಿದ್ದರು.ಸರಿತಾ ಪ್ರಾರ್ಥಿಸಿದರು. ಸಮಿತಿಯ ಸಹ ಕಾರ್ಯದರ್ಶಿ ಸತೀಶ್​ ಕುಲಾಲ್​ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ನಿತಿನ್​ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಮಹಾ ಅನ್ನಸಂತರ್ಪಣೆಯಲ್ಲಿ 8 ಸಾವಿರಕ್ಕೂ ಅಧಿಕ ಜನರು ಪ್ರಸಾದ ಭೋಜನ ಸೇವಿಸಿದರು.

Leave a Reply

Your email address will not be published. Required fields are marked *

error: Content is protected !!