ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ನಡೆದ ನೇತ್ರ ಉಚಿತ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಉಚಿತ ಕನ್ನಡಕ ವಿತರಣೆ

ಉಡುಪಿ: ಶ್ರೀ ಉತ್ತರಾದಿ ಮಠದ 1008 ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯದ ಅವಧಿಯಲ್ಲಿ, ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಯವರು 1008 ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯ ಸಂಕಲ್ಪದಂತೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಇವರಿಂದ ಪರ್ಯಾಯ ಶ್ರೀ ಶಿರೂರು ಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನೇತ್ರ ಉಚಿತ ತಪಾಸಣೆ ಶಸ್ತ್ರ ಚಿಕಿತ್ಸೆ ಉಚಿತ ಕನ್ನಡಕ ವಿತರಣಾ ಶಿಬಿರ ವನ್ನು ಆಯೋಜಿಸಲಾಯಿತು.

ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಶಿರೂರು ಮಠದ ಶ್ರೀ ಲಕ್ಷೀವರ ತೀರ್ಥರನ್ನು ಸ್ಮರಿಸುತ್ತಾ, ಜನರ ನೇತ್ರ ಸಂಬಂಧಿ ಖಾಯಿಲೆ ಬಗ್ಗೆ ಅವರ ಕಾಳಜಿಯನ್ನು ನೆನಪಿಸಿಕೊಂಡರು. ಈ ಹಿಂದೆ ಪ್ರತೀ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯ ಪೂರ್ವದಲ್ಲಿ ಶಿರೂರು ಮಠದಲ್ಲಿ ನೇತ್ರ ಶಿಬಿರಗಳನ್ನು ನಡೆಸುತ್ತಿದ್ದೆವು. ಇನ್ನೂ ಮುಂದೆಯೂ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರ ಆಶೀರ್ವಾದದಿಂದ ಮುಂದುವರಿಸುವ ಇಚ್ಛೆ ಇದೆ ಎಂದರು.

ದೀಪ ಪ್ರಜ್ವಲನೆ ಮೂಲಕ ಶಿಬಿರ ಚಾಲನೆಗೊಳಿಸಿದ ಪರ್ಯಾಯ ಶ್ರೀ ಶಿರೂರು ಮಠದ ವೇದವರ್ಧನ ತೀರ್ಥ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ‘ಪರೋಪಕಾರ್ಯಥ ಇದಂ ಶರೀರo’ ಎಂಬಂತೆ, ನಮ್ಮ ಜೀವನ ಇರುವುದೇ ಇನ್ನೊಬ್ಬರ ಸೇವೆಗಾಗಿ. ಕೆಲಸ ಮಾಡಬೇಕು ಹಣ ಗಳಿಸಬೇಕು. ಹಾಗೇನೇ ಸಜ್ಜನರ ಸೇವೆಯನ್ನು ಮಾಡಬೇಕು. ಇದು ನಮ್ಮ ಕರ್ತವ್ಯ. ಗಳಿಸಿದ ಹಣಕ್ಕೆ ಸರಕಾರಕ್ಕೆ ಹೇಗೆ ಟ್ಯಾಕ್ಸ್ ಕಟ್ಟುತ್ತೇವೋ, ಈ ಮನುಷ್ಯ ಜೀವನ ನೀಡಿದ ದೇವರಿಗೆ, ಜನರ ಸೇವೆಯ ಮೂಲಕ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಕೇವಲ ಹಣ ಸಂಪಾದನೆಯೇ ಗುರಿ ಆಗಬಾರದು ಎಂದರು. ಚಾತುರ್ಮಾಸ್ಯದ ಅವಧಿಯಲ್ಲಿ ಎಂ.ಎಂ.ಜೋಶಿ ಆಸ್ಪತ್ರೆಯವರು ಸಂಕಲ್ಪಿಸಿದ 1008 ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯ ಗುರಿ ಯಶಸ್ವಿಯಾಗಲಿ ಎಂದರು. ಪ್ರಸಾದ್ ನೇತ್ರಾಲಯ ಮುಖಾಂತರ ನಡೆಯುತ್ತಿರುವ ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದರು.

ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿಯರು ಮಾತನಾಡುತ್ತಾ, ಶ್ರೀ ಉತ್ತರಾದಿ ಮಠದ ಶ್ರೀಗಳಾದ 1008 ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯದ ಅವಧಿಯಲ್ಲಿ 1008 ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ನಡೆಸಲು ಸಂಕಲ್ಪಿಸಿದ್ದೇವೆ. ಈಗಾಗಲೇ ನಮ್ಮ ಗುರಿಯನ್ನು ತಲುಪವ ಹಂತದಲ್ಲಿದ್ದು, ಪರ್ಯಾಯ ಶ್ರೀಗಳು ಉಡುಪಿಯ ಪುಣ್ಯಭೂಮಿಯಲ್ಲಿ ಈ ನೇತ್ರ ಶಿಬಿರ ನಡೆಸಲು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಉತ್ತರಾದಿ ಮಠದ ವ್ಯವಸ್ಥಾಪಕ ಪ್ರಕಾಶಾಚಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ್ ನೇತ್ರಾಲಯದ ಮುಖ್ಯ ಆಡಳಿತಾಧಿಕಾರಿ ಮಧ್ವವಲ್ಲಭ ಆಚಾರ್ಯ ಕಾರ್ಯಕ್ರಮ ಸಂಯೋಜಿಸಿದ್ದರು.

Leave a Reply

Your email address will not be published. Required fields are marked *

error: Content is protected !!