ದತ್ತಪೀಠದಲ್ಲಿ ದತ್ತ ಜಯಂತಿ – ಡಿ.19 ರಿಂದ ದತ್ತಮಾಲಾ ಅಭಿಯಾನ: ಸುನಿಲ್ ಕೆ. ಆರ್
ಮಂಗಳೂರು: ಹಿಂದೂಗಳ ಶ್ರದ್ಧಾ ಕೇಂದ್ರವಾದ ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತ ಜಯಂತಿಯ ಅಂಗವಾಗಿ ಡಿ. 19 ರಿಂದ 29ರ ವರೆಗೆ ದತ್ತಮಾಲಾ ಅಭಿಯಾನ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಭಜರಂಗ ದಳದ ಸಂಯೋಜಕ ಸುನಿಲ್ ಕೆ. ಆರ್. ತಿಳಿಸಿದರು.
ಮಂಗಳೂರಿನಲ್ಲಿ ಇಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 19ರಂದು ನೂರಾರು ಕಾರ್ಯಕರ್ತರು, ಭಕ್ತರು ಮಾಲಾಧಾರಣೆ ಮಾಡುವ ಮೂಲಕ ಶ್ರೀ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಈ ಅಭಿಯಾನದ ಅಂಗವಾಗಿ, ಡಿ. 28 ರಂದು ದತ್ತ ಪೀಠದಲ್ಲಿ ಶ್ರೀ ಅನುಸೂಯ ದೇವಿ ಪೂಜೆ, ಶ್ರೀ ಗಣಪತಿ ಹೋಮ ಮತ್ತು ದುರ್ಗಾಹೋಮ ನಡೆಯಲಿದೆ. ಹಾಗೂ ಡಿ. 29 ದತ್ತ ಜಯಂತಿಯಂದು ಗಣಪತಿ ಹೋಮ, ದತ್ತ ಹೋಮ ಹಾಗೂ ದತ್ತಪೀಠ, ದತ್ತ ಪಾದುಕೆ ದರ್ಶನ ನಡೆಯಲಿದೆ.
ಆ ಬಳಿಕ ಈ ಅಭಿಯಾನವನ್ನು ಮುಕ್ತಾಯಗೊಳಿಸಲಾಗುತ್ತದೆ. ಈ ಅಭಿಯಾನದಲ್ಲಿ ಹಿಂದೂಗಳ ಶೃದ್ಧಾಕೇಂದ್ರವಾಗಿರುವ ದತ್ತಪೀಠವನ್ನು ಇಸ್ಲಾಮೀಕರಣದಿಂದ ಮುಕ್ತಗೊಳಿಸಿ ಹಿಂದೂ ವೈದಿಕ ವಿಧಿವಿಧಾನದ ಮೂಲಕ ನಿತ್ಯ ತ್ರಿಕಾಲಪೂಜೆಗೆ ಅವಕಾಶ ಕೊಡಬೇಕೆಂದು ಆಗ್ರಹಿಸಿ ಈ ವರ್ಷವೂ ಈ ಅಭಿಯಾನದಲ್ಲಿ ಮಂಗಳೂರು ಮಹಾನಗರದದಿಂದ 5,000 ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.