ಉಡುಪಿ: ಖರ್ಗೆ ಭಾಷಣ ಸ್ಥಳ ಸ್ವಚ್ಛಗೊಳಿಸಿದ ಬಿಜೆಪಿ ವಿರುದ್ಧ ಕಾಂಗ್ರೆಸ್ ಸತ್ಯಾಗ್ರಹ

ಸೆ.12ರಂದು ಅಜ್ಜರಕಾಡಿನ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ; ‘ಬಿಜೆಪಿ ಮನುವಾದಿ ಮನಸ್ಥಿತಿ ಮೊದಲು ಸ್ವಚ್ಛಗೊಳಿಸಿಕೊಳ್ಳಲಿ’ ಎಂದು ಹರೀಶ್ ಕಿಣಿ ಟೀಕೆ

ಉಡುಪಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಬಿಜೆಪಿ ಕಾರ್ಯಕರ್ತರು ಸ್ವಚ್ಛಗೊಳಿಸುವ ಮೂಲಕ ಹಿರಿಯ ರಾಷ್ಟ್ರೀಯ ನಾಯಕನಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಸೆಪ್ಟೆಂಬರ್ 12ರಂದು ಉಡುಪಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ತಿಳಿಸಿದರು.

ಅಜ್ಜರಕಾಡಿನ ಗಾಂಧಿ ಪ್ರತಿಮೆ ಎದುರು ಅಂದು ಬೆಳಗ್ಗೆ 10.30ಕ್ಕೆ ಸತ್ಯಾಗ್ರಹ ನಡೆಯಲಿದ್ದು, ರಾಜ್ಯದ 41 ಕಡೆಗಳಲ್ಲಿ‌ ಏಕಕಾಲದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ಗುರುವಾರ ಬ್ರಹ್ಮಗಿರಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ತಮ್ಮ ‘ಮನುವಾದಿ ಮನಸ್ಥಿತಿ’ಯನ್ನು ಪ್ರದರ್ಶಿಸಿದ್ದಾರೆ. ಮೊದಲು ಅವರು ತಮ್ಮ ಮನಸ್ಸಿನಲ್ಲಿರುವ ಮನುವಾದಿ ಕೊಳಕನ್ನು ಸ್ವಚ್ಛಗೊಳಿಸಿಕೊಳ್ಳಲಿ ಎಂದು ಟೀಕಿಸಿದರು.

ಬಿಜೆಪಿ ಆಡಳಿತದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದ ಅವರು, ಪ್ರತಿವರ್ಷ 50 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲ್, ಪ್ರಚಾರ ಸಮಿತಿ ಪ್ರಮುಖರಾದ ಡಾ. ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಪೂಜಾರಿ, ರಾಜೇಶ್ ಶೆಟ್ಟಿ, ದಿನಕರ್ ಶೆಟ್ಟಿ, ದಯಾನಂದ, ಚಂದ್ರಿಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!