ಕಾಪುವಿನಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ನೂತನ ಶಾಖೆ ಶುಭಾರಂಭ

ಉಡುಪಿ: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನೂತನ 8ನೇ ಶಾಖೆಯು ಕಾಪು ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದ ಮುಖ್ಯರಸ್ತೆಯಲ್ಲಿರುವ ಶ್ರೀ ನಾರಾಯಣಗುರು ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಶುಭಾರಂಭಗೊಂಡಿತು.

ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು, ಆಧುನಿಕ ಯುಗದಲ್ಲಿ ಸಾಂಪ್ರದಾಯಿಕ ವೃತ್ತಿಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲೂ ಸಮಾಜದ ಅಗತ್ಯಗಳಿಗೆ ಸ್ಪಂದಿಸುತ್ತಾ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.

ಸಂಘವು ಸತತ ಎರಡು ವರ್ಷ ರಾಜ್ಯ ಪ್ರಶಸ್ತಿಗೆ ಭಾಜನವಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ₹100 ಕೋಟಿ ಠೇವಣಿ ಸಂಗ್ರಹಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಸಂಗ್ರಹಿಸಿದ ಠೇವಣಿಯಲ್ಲಿ ಸುಮಾರು ₹80 ಕೋಟಿ ಸಾಲ ವಿತರಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ವಿವಿಧ ಸಹಕಾರಿ ಸಂಸ್ಥೆಗಳ ನಡುವಿನ ತೀವ್ರ ಪೈಪೋಟಿಯಲ್ಲೂ ಈ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಂತೋಷ ಕುಲಾಲ್ ಪಕ್ಕಾಲ್ ಮಾತನಾಡಿ, ಸಂಸ್ಥೆಯ ಆರ್ಥಿಕ ಬೆಳವಣಿಗೆಯ ಜತೆಗೆ ನಾಡಿನ ಸಂಸ್ಕೃತಿ, ಸಾಂಪ್ರದಾಯಿಕ ಕಲೆ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದರು.

ಕುಂಬಾರಿಕೆ ಕಲೆಯನ್ನು ಪ್ರೋತ್ಸಾಹಿಸುವ ಜತೆಗೆ ಕ್ಲೇ ಆರ್ಟ್ ಶೋರೂಮ್ ಮೂಲಕ ವಿವಿಧ ಕಲಾಕೃತಿಗಳ ತಯಾರಿ ಮತ್ತು ಪ್ರದರ್ಶನಕ್ಕೆ ಉತ್ತೇಜನ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಬ್ಯಾಂಕಿಂಗ್ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಕಾಪು ಶಾಖೆಯ ಮೂಲಕ ಸ್ಥಳೀಯ ಜನರಿಗೆ ಅಗತ್ಯವಿರುವ ವಿವಿಧ ಸಾಲ ಹಾಗೂ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

100 ಕೋಟಿ ಠೇವಣಿ ಸಾಧನೆ: 2016ರಲ್ಲಿ ಸುಮಾರು ₹5.5 ಕೋಟಿ ಠೇವಣಿ ಹೊಂದಿದ್ದ ಸಂಸ್ಥೆಯು ಇದೀಗ ₹100 ಕೋಟಿ ಠೇವಣಿ ಸಂಗ್ರಹದ ಗುರಿ ತಲುಪಿದೆ. ಸಿಬ್ಬಂದಿಯ ಪರಿಶ್ರಮ, ಗ್ರಾಹಕರ ವಿಶ್ವಾಸ ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.

ಸಂಸ್ಥೆಯು ಆರ್ಥಿಕವಾಗಿ ಬೆಳೆಯುವುದರ ಜತೆಗೆ ಸಮಾಜದ ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಉಳಿವಿಗೂ ಕೊಡುಗೆ ನೀಡಬೇಕು ಎಂಬ ಆಶಯದೊಂದಿಗೆ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಠೇವಣಿ ಪತ್ರ ಬಿಡುಗಡೆ ಮಾಡಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.

ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಬಿಲ್ಲವರ ಸಹಾಯಕರ ಸಂಘದ ಅಧ್ಯಕ್ಷ ವಿಕ್ರಮ್, ಕುಲಾಲ ಸಂಘ ಕಾಪು ಅಧ್ಯಕ್ಷ ಹರೀಶ್ ಕುಲಾಲ್, ಸಂಘದ ಉಪಾಧ್ಯಕ್ಷ ಹರೀಶ್ ಕುಲಾಲ್ ಹಂದಿಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸ್ಥಳೀಯ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ದೇಣಿಗೆ ಹಸ್ತಾಂತರಿಸಲಾಯಿತು. ಸಂಘದ ಸಿಇಒ ಸುಧಾಕರ್ ಕುಲಾಲ್ ಸ್ವಾಗತಿಸಿದರು. ಮಂಜುನಾಥ್ ಕೆ. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!