ವಿಶೇಷ ಶಾಲಾ ಶಿಕ್ಷಕರಿಗಾಗಿ ‘ಕಲಾವಲ್ಲರಿ’ ಕಾರ್ಯಕ್ರಮ
ಕೋಟ: ರೋಟರಿ ಕ್ಲಬ್ ಕೋಟೇಶ್ವರ ಮತ್ತು ಆಟಿಸಂ ಸೊಸೈಟಿ ಆಫ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ವಿಶೇಷ ಶಾಲಾ ಶಿಕ್ಷಕರಿಗಾಗಿ ‘ಕಲಾವಲ್ಲರಿ’ ಎಂಬ ಕಾರ್ಯಕ್ರಮವು ಕೋಟದ ಮಣೂರಿನ ರಾಜ ಲಕ್ಷ್ಮೀ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಶೇಷ ಶಾಲಾ ಶಿಕ್ಷಕರು ಇತರ ಶಾಲಾ ಶಿಕ್ಷಕರಂತೆ ಸಮಾನರು. ತನ್ನಿಂದಾದಷ್ಟು ಶಿಕ್ಷಕರಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು
ಇದೇ ವೇಳೆ ನಡೆದ ‘ಕಲಾವಲ್ಲರಿ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ವಿಶೇಷ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿ ನೀಡಿದ ರೆಟ್ರೋ ಶೈಲಿಯ ನೃತ್ಯ ಪ್ರದರ್ಶನವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಈ ವೇಳೆ ಬಡಗಬೆಟ್ಟು ಕ್ರೆಡಿಟ್ ಕೋಪರೇಟಿವ್ ಸೊಸೈಟಿ ವತಿಯಿಂದ ವಿಶೇಷ ಶಾಲೆಗಳಲ್ಲಿ ಶಿಕ್ಷಣ, ಕಲೆ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಸಮರ್ಪಣೆಯಿಂದ ಸೇವೆ ಸಲ್ಲಿಸಿದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟೇಶ್ವರದ ಅಧ್ಯಕ್ಷರಾದ ರೊ. ಅಕ್ಷತಾ ಗಿರೀಶ್ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲೆ 3182ರ ಗವರ್ನರ್ ರೊ. ಬಿ. ಎಂ. ಭಟ್ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಸಂಘದ ಅಧ್ಯಕ್ಷರಾದ ಜಯಕರ್ ಶೆಟ್ಟಿ ಇಂದ್ರಾಳಿ, ಅಸಿಸ್ಟೆಂಟ್ ಗವರ್ನರ್ ರೊ. ಸುಧಾಕರ್ ಶೆಟ್ಟಿ, ಪೂರ್ವ ಅಸಿಸ್ಟೆಂಟ್ ಗವರ್ನರ್ ರೊ. ಗಣೇಶ್ ಶೆಟ್ಟಿ ಮೊಳಹಳ್ಳಿ , ಲಿಟರ್ಸಿ ವಲಯ 2ರ ವಲಯ ನಿರ್ದೇಶಕರಾದ ರೊ. ಕೃಷ್ಣ ಮೂರ್ತಿ ಪಿ. ಕೆ., ಆಟಿಸಂ ಸೊಸೈಟಿ ಆಫ್ ಉಡುಪಿಯ ಸಂಯೋಜಕರಾದ ಕೀರ್ತೀಶ್ ಎಸ್, ರಾಜ್ಯ ವಿಶೇಷ ಶಿಕ್ಷಕರ ಸಂಘದ ಕಾರ್ಯಧ್ಯಕ್ಷರಾದ ಡಾ.ಕಾಂತಿ ಹರೀಶ್, ರೋಟರಿ ಕ್ಲಬ್ ಕಾರ್ಯದರ್ಶಿ ರೊ. ಅರುಣ ದೇವಾಡಿಗ, ಆನ್ಸ್ ಕ್ಲಬ್ ಕೋಟೇಶ್ವರದ ಅಧ್ಯಕ್ಷ್ಯೆ ಸುಜಾತ ಶೆಟ್ಟಿ ಹಾಗೂ ರೋಟರಾಕ್ಟ್ ಕ್ಲಬ್ ಕೋಟೇಶ್ವರದ ಅಧ್ಯಕ್ಷರಾದ ರೊ. ಸತ್ಯನ್ ಕಾಂಚನ್, ಜಿಲ್ಲಾಧ್ಯಕ್ಷರಾದ ರವೀಂದ್ರ ಎಚ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.





