ಉಜಿರೆ ಬಾಲಕ ಅಪಹರಣ ಪ್ರಕರಣ: ಎಸ್ಪಿ ಭೇಟಿ – ಪ್ರಕರಣ ಬೇಧಿಸಲು ನಾಲ್ಕು ತಂಡ ರಚನೆ
ಬೆಳ್ತಂಗಡಿ: ಉಜಿರೆ ನಿವಾಸಿ ಎಂಟು ವರ್ಷದ ಬಾಲಕ ಅನುಭವ್ ಅಪಹರಣ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಾಗಲೇ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಎಸ್ ಪಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದಾರೆ.
ಅಲ್ಲದೆ ಅಪಹರಣಕಾರರು ಬಿಟ್ ಕಾಯಿನ್ ಕೇಳುತ್ತಿದ್ದು ಈ ಬಗ್ಗೆಯೂ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿಗಳು ಮನೆಮಂದಿಯ ಬಗ್ಗೆ ಮಾಹಿತಿ ಗೊತ್ತಿರುವವರೆ ಆಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಉಜಿರೆ ಉದ್ಯಮಿ ರಥಬೀದಿ ನಿವಾಸಿ ಎ.ಕೆ.ಶಿವನ್ ಎಂಬುವರ ಮೊಮ್ಮಗ ಅನುಭವ್ (8)ನನ್ನು ನಿನ್ನೆ ಸಂಜೆ ಅಪರಿಚಿತರು ಅಪಹರಣ ಮಾಡಿದ್ದರು. ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ವೇಳೆ ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದು, ನಂತರ ಬಾಲಕನ ತಾಯಿಗೆ ಕರೆಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ನೀಡಲು ಬೇಡಿಕೆಯಿರಿಸಿದ್ದರು. ಅದಾದ ಬಳಿಕ ಇಂದು ಬಾಲಕನ ತಂದೆಯ ಜೊತೆಗೆ ಸಂಪರ್ಕ ಬೆಳೆಸಿ ಅಪಹರಣಕಾರರು ಹತ್ತು ಕೋಟಿ ರೂ. ನೀಡಲು ಬೇಡಿಕೆಯಿರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.