ರಕ್ಷಾ ಬಂಧನ ಪ್ರೀತಿ, ವಿಶ್ವಾಸ- ಮಾನವೀಯ ಮೌಲ್ಯಗಳ ಸಂಕೇತ: ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ ಹಾಗೂ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಬ್ರಹ್ಮಗಿರಿ, ಉಡುಪಿ ಇವರ ಸಹಯೋಗದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಅವರು, “ರಕ್ಷಾ ಬಂಧನವು ಕೇವಲ ರಾಖಿ ಕಟ್ಟುವ ಹಬ್ಬವಲ್ಲ; ಇದು ಪ್ರೀತಿ, ವಿಶ್ವಾಸ, ಗೌರವ ಹಾಗೂ ಪರಸ್ಪರ ಕಾಳಜಿಯ ಪವಿತ್ರ ಬಾಂಧವ್ಯದ ಸಂಕೇತವಾಗಿದೆ. ರಾಖಿಯು ಕೇವಲ ಒಂದು ದಾರವಲ್ಲ, ಬದಲಾಗಿ ಸಂಬಂಧಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಭಾವನಾತ್ಮಕ ಬಂಧವಾಗಿದ್ದು, ಪರಸ್ಪರ ಸಹಕಾರ, ಸುರಕ್ಷತೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರುತ್ತದೆ” ಎಂದು ಅಭಿಪ್ರಾಯಪಟ್ಟರು.

ಇಂದಿನ ವೇಗದ ಹಾಗೂ ಒತ್ತಡಭರಿತ ಜೀವನಶೈಲಿಯಲ್ಲಿ ಮನಸ್ಸಿನ ನೆಮ್ಮದಿ, ಆತ್ಮಸ್ಥೆöÊರ್ಯ ಹಾಗೂ ಸಕಾರಾತ್ಮಕ ಚಿಂತನೆಗಾಗಿ ಆಧ್ಯಾತ್ಮಿಕ ಚಿಂತನೆ, ಭಗವಂತನ ಸ್ಮರಣೆ ಮತ್ತು ಧ್ಯಾನಕ್ಕೆ ಹೆಚ್ಚಿನ ಮಹತ್ವವಿದೆ. ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಮಾನವೀಯ ಮೌಲ್ಯಗಳು, ಆತ್ಮಜ್ಞಾನ ಹಾಗೂ ಧ್ಯಾನದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸದ್ಭಾವನೆಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆಯಾಗಿದೆ ಎಂದು ಪ್ರಜಾಪಿತಾ ಬ್ರಹ್ಮಕುಮಾರಿ ಸಂಸ್ಥೆಯ ಸಂಚಾಲಕರಾದ ಬಿ.ಕೆ. ಸುಮಕ್ಕ ಹೇಳಿದರು. ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ಬಿ.ಕೆ. ಅಶ್ವಿನಿ, ಬಿ.ಕೆ. ಮೋಹನ್, ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಇದರ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಹೆಗ್ಡೆ, ಸಂಘದ ಸ್ಥಿರಾಸ್ತಿ ಮೌಲ್ಯ ಮಾಪಕರಾದ ಮುರಳೀಧರ ಶೆಟ್ಟಿ, ನಿರ್ದೇಶಕರಾದ ಎಲ್. ಉಮಾನಾಥ, ವಿನಯ್ ಕುಮಾರ್ ಟಿ.ಎ, ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




