ರೈತ 50 ಸಾವಿರ ರೂ. ಸಾಲ ಕಟ್ಟದಿದ್ದರೆ ಜಮೀನು ಹರಾಜು- ಉದ್ಯಮಿಗಳಿಗೆ ಸಾವಿರಾರು ಕೋಟಿ ಸಾಲಮನ್ನಾ: ರಾಹುಲ್ ಗಾಂಧಿ ಆಕ್ರೋಶ

ಹೊಸದಿಲ್ಲಿ, ಆ.27: ದೇಶದಲ್ಲಿ ದೊಡ್ಡ ಉದ್ಯಮಿಗಳಿಗೆ ಒಂದು ರೀತಿಯ ಹಾಗೂ ಸಾಮಾನ್ಯ ಜನರಿಗೆ ಮತ್ತೊಂದು ರೀತಿಯ ನ್ಯಾಯ ವ್ಯವಸ್ಥೆ ಇದೆ ಎಂದು ಆರೋಪಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (NCLT)ಯ ಕಾರ್ಯವೈಖರಿಯನ್ನು ಉಲ್ಲೇಖಿಸಿದ ಅವರು, ಸಾಮಾನ್ಯ ಸಾಲಗಾರರನ್ನು ದೊಡ್ಡ ಕಾರ್ಪೊರೇಟ್ ಸಾಲಗಾರರಿಗಿಂತ ಭಿನ್ನವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ರೈತರು, ವೇತನ ಪಡೆಯುವವರು ಮತ್ತು ವಿದ್ಯಾರ್ಥಿಗಳು ಸಾಲ ಪಡೆಯುವಾಗ ಅಥವಾ ಮರುಪಾವತಿಸುವಾಗ ಕಠಿಣ ನಿಯಮಗಳನ್ನು ಎದುರಿಸುತ್ತಾರೆ. ಆದರೆ ಆಯ್ದ ಶ್ರೀಮಂತ ಉದ್ಯಮಿಗಳಿಗೆ ಬ್ಯಾಂಕ್‌ಗಳ ಹಣ ಸುಲಭವಾಗಿ ಲಭ್ಯವಾಗುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

‘ಒಬ್ಬ ರೈತ 50 ಸಾವಿರ ಪಾವತಿಸದಿದ್ದರೆ ಆತನ ಜಮೀನು ಹರಾಜಾಗುತ್ತದೆ. ವೇತನ ಪಡೆಯುವ ವ್ಯಕ್ತಿ ಒಂದು EMI ಪಾವತಿಸಲು ವಿಫಲವಾದರೂ ಬ್ಯಾಂಕ್‌ ನವರು ಮನೆಗೆ ಬರುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಾಲ ಪಡೆಯಲೂ ಸಾಧ್ಯವಾಗುವುದಿಲ್ಲ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಆದರೆ ಆಯ್ದ ಸ್ನೇಹಿತರಿಗೆ ಬ್ಯಾಂಕ್‌ ನ ಹಣ ವೈಯಕ್ತಿಕ ಆಸ್ತಿಯಂತಿದೆ. ಎಷ್ಟು ಬೇಕಾದರೂ ಪಡೆದುಕೊಳ್ಳಿ, ನಿಮಗೆ ಅನಿಸಿದಷ್ಟು ಮರುಪಾವತಿಸಿ’ ಎಂದು ಅವರು ಟೀಕಿಸಿದ್ದಾರೆ.

‘ಮೋದಿ ಸರ್ಕಾರ ದೇಶದಲ್ಲಿ ಎರಡು ವ್ಯವಸ್ಥೆಗಳನ್ನು ಸೃಷ್ಟಿಸಿದೆ. ಒಂದು ಬೆರಳೆಣಿಕೆಯಷ್ಟು ಶತಕೋಟ್ಯಾಧಿಪತಿಗಳಿಗಾಗಿ ಮತ್ತು ಇನ್ನೊಂದು ಎಲ್ಲರಿಗಾಗಿ’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಪೋಸ್ಟ್ ನೊಂದಿಗೆ ರಾಹುಲ್ ಗಾಂಧಿಯವರು ಎಸ್ಸೆಲ್ ಗ್ರೂಪ್ ಅಧ್ಯಕ್ಷ ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕರಣದಲ್ಲಿ, ಸುಮಾರು 21,696 ಕೋಟಿ ರೂ. ಮೊತ್ತದ ಅಂಗೀಕೃತ ಸಾಲದ ಕ್ಲೈಮ್‌ ಗಳ ನಡುವೆ 6.5 ಕೋಟಿ ರೂಪಾಯಿ ಪಾವತಿಸುವ ಮರುಪಾವತಿ ಯೋಜನೆಗೆ NCLT ಅನುಮೋದನೆ ನೀಡಿದೆ ಎಂಬ ವರದಿಯನ್ನು ಉಲ್ಲೇಖಿಸಿದ್ದಾರೆ.

ಸುಭಾಷ್ ಚಂದ್ರ ಸ್ಪಷ್ಟನೆ: ಇದೇ ಸಂದರ್ಭದಲ್ಲಿ, ಎಸ್ಸೆಲ್ ಗ್ರೂಪ್ ಅಧ್ಯಕ್ಷ ಸುಭಾಷ್ ಚಂದ್ರ ಅವರು NCLTಯಲ್ಲಿ ನಡೆಯುತ್ತಿರುವ ತಮ್ಮ ವೈಯಕ್ತಿಕ ದಿವಾಳಿತನ ಪ್ರಕ್ರಿಯೆಗೆ ಸಂಬಂಧಿಸಿದ ವರದಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ವಿರುದ್ಧದ ಸಾಲದ ಹಕ್ಕುಗಳ (ಕ್ಲೈಮ್‌) ಮೊತ್ತವನ್ನು ವರದಿಗಳು ತಪ್ಪಾಗಿ ಬಿಂಬಿಸಿವೆ ಎಂದು ಅವರು ಹೇಳಿದ್ದಾರೆ. ತಾವು ವೈಯಕ್ತಿಕ ಗ್ಯಾರಂಟರ್ ಆಗಿದ್ದರೂ, ಯಾವುದೇ ಸಾಲದಾತರಿಂದ ವೈಯಕ್ತಿಕವಾಗಿ ಹಣವನ್ನು ಎರವಲು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಿವಾಳಿತನ ಪ್ರಕ್ರಿಯೆಯಲ್ಲಿ ಸಾಲದಾತರು ಸಲ್ಲಿಸಿರುವ ಒಟ್ಟು ಕ್ಲೈಮ್‌ ಗಳ ಮೊತ್ತವನ್ನೇ ಪ್ರಸ್ತುತ ಬಾಕಿ ಇರುವ ಸಾಲ ಎಂದು ಪರಿಗಣಿಸಬಾರದು ಎಂದೂ ಅವರು ಹೇಳಿದ್ದಾರೆ.

ಸಾಲದಾತರು ಒಟ್ಟು ಸುಮಾರು 22,006 ಕೋಟಿ ರೂ. ಮೊತ್ತದ ಕ್ಲೈಮ್‌ ಗಳನ್ನು ಸಲ್ಲಿಸಿದ್ದಾರೆ. ಈ ಪೈಕಿ 21,696 ಕೋಟಿ ರೂ. ಮೊತ್ತದ ಕ್ಲೈಮ್‌ಗಳನ್ನು ಅಂಗೀಕರಿಸಲಾಗಿದೆ ಎಂದು ಚಂದ್ರ ತಿಳಿಸಿದ್ದಾರೆ.

ಆದರೆ, ತಮ್ಮ ಮರುಪಾವತಿ ಯೋಜನೆಗೆಆಕ್ಷೇಪ ವ್ಯಕ್ತಪಡಿಸಿರುವ ಸಾಲದಾತರ ಕ್ಲೈಮ್‌ಗಳ ಮೊತ್ತ 3,992 ಕೋಟಿ ರೂ. ಎಂದು ಅವರು ಹೇಳಿದ್ದಾರೆ. ಇದರಲ್ಲಿ 620 ಕೋಟಿ ರೂ. ಈಗಾಗಲೇ ಇತ್ಯರ್ಥಗೊಂಡಿದ್ದು, 3,372 ಕೋಟಿ ರೂ. ಬಾಕಿ ಉಳಿದಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!