ನವೆಂಬರ್ ಪ್ರಥಮ ವಾರ ಉಡುಪಿ ನಗರಕ್ಕೆ ಪೈಪ್‌ಲೈನ್ ಮೂಲಕ ಗ್ಯಾಸ್ ಹಂಚಿಕೆ
ಉಡುಪಿ: ಜಿಲ್ಲೆಯಲ್ಲಿ ಸುದೀರ್ಘ ಆರೇಳು ವರ್ಷದಿಂದ ಮನೆಮನೆಗೆ ಪೈಪ್ ಲೈನ್ ಮೂಲಕ ಗ್ಯಾಸ್ ವಿತರಣೆ ವ್ಯವಸ್ಥೆಯ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅದಾನಿ ಸಂಸ್ಥೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಚರ್ಚಿಸಿದಂತೆ ಸಂಸ್ಥೆಯ ಅಧಿಕಾರಿಗಳು ನವೆಂಬರ್ ಪ್ರಥಮ ವಾರದಲ್ಲಿ ಪೈಪ್‌ಲೈನ್ ಮೂಲಕ ಗ್ಯಾಸ್ ವಿತರಣೆ ಮಾಡುವುದಾಗಿ ಸಭೆಗೆ ತಿಳಿಸಿದರು.
ಸುಮಾರು 25,000 ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆ ವಿಳಂಬವಾಗುತ್ತಿರುವ ಬಗ್ಗೆ ಇಲಾಖಾ ಅಧಿಕಾರಗಳಿಗೆ ತರಾಟೆ ತೆಗೆದುಕೊಂಡ ಸಂಸದ ಕೋಟ ಪಣಂಬೂರಿನಿಂದ ಕರಾವಳಿ ಜಂಕ್ಷನ್ ವರೆಗೆ ಸುಮಾರು 48 ಕಿ.ಮೀ ಪೈಪ್ ಲೈನ್ ವಿಸ್ತರಣೆಯಾಗಿದ್ದು, ಮುಂದುವರೆದು ಕರಾವಳಿ ಜಂಕ್ಷನ್‌ನಿಂದ ಮಣಿಪಾಲದ ಕಾಯಿನ್ ಸರ್ಕಲ್ ವರೆಗೆ ಪೈಪ್ ಲೈನ್ ಸಂಪರ್ಕ ವಾಗಿದ್ದರೂ ವಿಳಂಬಧೋರಣೆ ತೋರುವುದು ಅರ್ಥವಿಲ್ಲ. ಆದ್ದರಿಂದ, ತಕ್ಷಣ ಮನೆಮನೆಗೆ ಗ್ಯಾಸ್ ವಿತರಣೆ ಆರಂಭಿಸಬೇಕೆಂದು ಸಂಸದರು ಆಗ್ರಹಿಸಿದರು.
ಸುಮಾರು 2,000 ಕುಟುಂಬಗಳಿಗೆ ಪ್ರಥಮ ಹಂತದಲ್ಲಿ ಪೈಪ್‌ಲೈನ್ ಮೂಲಕ ಗ್ಯಾಸ್ ಹಂಚಿಕೆಗಾಗಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಒಟ್ಟು 300 ಕಿ.ಮೀ ವ್ಯಾಪ್ತಿಯ ಪೈಪ್ ಲೈನ್ ವಿಸ್ತರಣಾ ಜಾಲವು ಯೋಜನೆಯ ಗುರಿಯಾಗಿದ್ದು, ಸುಮಾರು 200 ಕಿ.ಮೀ ವರೆಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ನಗರಸಭಾ ಅಧಿಕಾರಿಗಳು ಮಳೆಗಾಲದಲ್ಲಿ ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಿದ್ದರಿಂದ ಅಕ್ಟೋಬರ್ ನಲ್ಲಿ ಕಾಮಗಾರಿ ಆರಂಭಿಸಲು ನವೆಂಬರ್ ಪ್ರಥಮ ವಾರದಲ್ಲಿ ಮನೆಮನೆಗೆ ಅಡಿಗೆ ಗ್ಯಾಸ್ ಸಂಪರ್ಕ ನೀಡಲು ಅದಾನಿ ಸಂಸ್ಥೆಗೆ ತಿಳಿಸಿದರು.
ನಗರಸಭೆಯ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನ ವಿಳಂಬ ಸಲ್ಲದು. ಸಂಸದರ ಮಾರ್ಗದರ್ಶನ ತಕ್ಷಣ ಕಾಮಗಾರಿ ಕೈಗೊಳ್ಳಲಾಗುವುದು ಮತ್ತು ನವೆಂಬರ್ ಪ್ರಥಮ ವಾರದಲ್ಲಿ ಗ್ಯಾಸ್ ಸಂಪರ್ಕ ನೀಡಲು ಜಿಲ್ಲಾಧಿಕಾರಿಗಳು ಸಭೆಗೆ ಸೂಚನೆ ನೀಡಿದರು. ಈ ಮಧ್ಯೆ ಗೇಲ್ ಸಂಸ್ಥೆಯು ಅನಿಲ ಸರಬರಾಜು ವ್ಯವಸ್ಥೆಯಲ್ಲಿನ ಕಾಮಗಾರಿಯನ್ನು ಪೂರ್ತಿ ಮುಗಿಸಿದ್ದರೂ ಪಣಂಬೂರಿನಲ್ಲಿ ಗ್ಯಾಸ್ ವಿತರಣಾ ವ್ಯವಸ್ಥೆಯ ಯೋಜನೆಯು ಪೂರ್ಣಗೊಂಡಿದ್ದರಿಂದ ಜಿಲ್ಲೆಯಲ್ಲಿ ಬಳಕೆಯಿರುವ ಸಿ.ಎನ್.ಜಿ ವಿತರಣಾ ಕೇಂದ್ರಗಳಿಗೆ ಸರಿಯಾದ ಸಮಯದಲ್ಲಿ ಸಿ.ಎನ್.ಜಿ ಗ್ಯಾಸನ್ನು ಪೂರೈಸುವ ಬಗ್ಗೆ ಸಭೆಗೆ ತಿಳಿಸಿದರು. ಅಲ್ಲದೇ, ಅರ್ಜಿ ಹಾಕಿದ ಇತರ ವಿತರಣಾ ಸಂಸ್ಥೆಗೆ ಗ್ಯಾಸ್ ಸಂಪರ್ಕ ನೀಡಲು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ, ಅದಾನಿ ಕಂಪೆನಿಯ ಯೋಜನಾ ಅನುಷ್ಠಾನದ ಅಧಿಕಾರಿ ರಾಹುಲ್, ನಗರಸಭೆಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ದುರ್ಗಾಪ್ರಸಾದ್, ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶದ ಸುಬ್ರಹ್ಮಣ್ಯ, ಪ್ರಿನ್ಸ್ ಲಾರೆನ್ಸ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗೇಲ್ ಕಂಪೆನಿ, ಆಹಾರ ನಾಗರಿಕ ಸರಬರಾಜು ಇಲಾಖೆಯ ಮ್ಯಾನೇಜರ್ ಪ್ರಕಾಶ್ ಉಪಸ್ಥಿತರಿದ್ದರು.




