ಡೇವಿಡ್ ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿಯ ಕಾಲಿಗೆ ಗುಂಡೇಟು

ಹೆಬ್ರಿ: ಆಗಸ್ಟ್ 7ರಂದು ನಡೆದ ಮುದರಂಗಡಿ ಉದ್ಯಮಿ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿ ಅನೂಜ್‌ನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಸೋಮವಾರ ಮುಂಜಾನೆ ಹೆಬ್ರಿ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.

ಡೇವಿಡ್ ಹತ್ಯೆಗೆ ಶೂಟರ್‌ಗಳನ್ನು ಕಳುಹಿಸಿಕೊಟ್ಟ ಆರೋಪವನ್ನು ಅನೂಜ್ ಎದುರಿಸುತ್ತಿದ್ದು, ತನಿಖೆಯ ವೇಳೆ ಈತನ ಪಾತ್ರ ಬಹಿರಂಗವಾಗಿತ್ತು. ಅನೂಜ್ ನಾಲ್ಕು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದು, ಸುಪಾರಿ ಕೊಲೆ, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.

ಆರೋಪಿಯನ್ನು ಪೊಲೀಸರು ಇಂದು ಮುಂಜಾನೆ ವಿಚಾರಣೆ ಹಾಗೂ ತನಿಖೆಯ ನಿಮಿತ್ತ ಕರೆದೊಯ್ಯುತ್ತಿದ್ದ ವೇಳೆ ಹೆಬ್ರಿ ಬಳಿ ಮೂತ್ರ ವಿಸರ್ಜನೆಗಾಗಿ ವಾಹನದಿಂದ ಕೆಳಗಿಳಿಸಲಾಗಿತ್ತು. ಈ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅನೂಜ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಆರೋಪಿಯನ್ನು ತಡೆಯಲು ಪೊಲೀಸರು ಮುಂದಾದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಗುಂಡು ಅನೂಜ್‌ನ ಕಾಲಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಮೋಹನ್ ಹಾಗೂ ಕಾನ್ಸ್‌ಟೇಬಲ್ ಶ್ಯಾಮ್ ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಡೇವಿಡ್ ಹತ್ಯೆ ಪ್ರಕರಣದಲ್ಲಿ ಅನೂಜ್ ಶೂಟರ್‌ಗಳನ್ನು ಒದಗಿಸಿದ್ದಾನೆ ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

1 thought on “ಡೇವಿಡ್ ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿಯ ಕಾಲಿಗೆ ಗುಂಡೇಟು

Leave a Reply

Your email address will not be published. Required fields are marked *

error: Content is protected !!