ರಾಮಮಂದಿರದಿಂದ ರಾಜಕೀಯ ಲಾಭ ಪಡೆದ ಬಿಜೆಪಿ,ದೇಣಿಗೆ ದುರುಪಯೋಗದ ಹೊಣೆಯಿಂದ ನುಣುಚಿಕೊಳ್ಳುತ್ತಿದೆ: ಪ್ರಿಯಾಂಕಾ ಗಾಂಧಿ ಟೀಕೆ
ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ ಮಂದಿರದಿಂದ ರಾಜಕೀಯ ಲಾಭ ಪಡೆದುಕೊಳ್ಳಲು ಹಿಂಜರಿಯದ ಬಿಜೆಪಿ, ಇದೀಗ ರಾಮಮಂದಿರ ದೇಣಿಗೆಯ ದುರುಪಯೋಗ ಕುರಿತಾದ ಪ್ರಶ್ನೆಗಳಿಗೆ ಸಂಸತ್ತಿನಲ್ಲಿ ಉತ್ತರಿಸಲು ಉತ್ತರಪ್ರದೇಶ ರಾಜ್ಯದ ವಿಷಯ ಎಂದು ಹೇಳಿ ನಿರಾಕರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ.
ಮಳೆಗಾಲದ ಅಧಿವೇಶನವು ಮುಕ್ತಾಯದ ಹಂತದಲ್ಲಿದ್ದು, ಸಂಸತ್ತಿನಲ್ಲಿ ಮುಂದುವರಿದಿರುವ ಗದ್ದಲದ ಕುರಿತು ಪ್ರಶ್ನೆಗೆ ಸಂಸತ್ ಭವನ ಸಂಕೀರ್ಣದಲ್ಲಿ ಅವರು ಈ ಮೇಲಿನಂತೆ ಉತ್ತರಿಸಿದರು.
“ಸರ್ಕಾರಕ್ಕೆ ಜನರ ಬಗ್ಗೆ ಜವಾಬ್ದಾರಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಏಕೆಂದರೆ ಇದು ಅವರು ಪ್ರಶ್ನೆಗಳಿಗೆ ಉತ್ತರಿಸಬೇಕಾದ ಮತ್ತು ಹೇಳಿಕೆ ನೀಡಬೇಕಾದ ವೇದಿಕೆಯಾಗಿದೆ” ಎಂದು ಅವರು ಹೇಳಿದರು.
“ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯಿತು. ದೇಶದ ಯುವಕರು ದಿಲ್ಲಿಯಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಬೀದಿಗಿಳಿದರು. ಅವರ ಮೇಲೆ ಲಾಠಿಚಾರ್ಜ್ ನಡೆಸಲಾಯಿತು. ಅಶ್ರುವಾಯು ಪ್ರಯೋಗಿಸಲಾಯಿತು. ಪೆಲೆಟ್ ಗನ್ ಗಳಿಂದ ಗುಂಡು ಹಾರಿಸಲಾಯಿತು. ಬಿಹಾರದಲ್ಲಿ ಪ್ರತಿಭಟನಾಕಾರರ ಮೇಲೆ ಎಕೆ-47 ಬಳಸಲಾಗಿದೆ. ಇದಕ್ಕೆ ಉತ್ತರಿಸಲು ಸರ್ಕಾರವು ತಮಗೆ ಜವಾಬ್ದಾರಿಯಿಲ್ಲ ಎಂದು ಭಾವಿಸಿದೆ. ಇದು ಹೇಗೆ ಸಂಭವಿಸಿತು ಎಂಬುದರ ಕುರಿತು ಹೇಳಿಕೆ ನೀಡಲು ಕೂಡ ಅದು ಸಿದ್ಧವಿಲ್ಲ. ಇದಕ್ಕೆ ಆದೇಶಿಸಿದವರು ಯಾರು?” ಎಂದು ಅವರು ಪ್ರಶ್ನಿಸಿದರು.
“ದೇಶದ ಮೂಲೆ ಮೂಲೆಗಳಿಂದ ದೇಣಿಗೆ ಸಂಗ್ರಹವಾಗಿದೆ. ಜನರು ತಮ್ಮ ನಂಬಿಕೆಗಾಗಿ ದೇಣಿಗೆ ನೀಡಿದ್ದಾರೆ. ಇದು ದೇವಸ್ಥಾನಕ್ಕಾಗಿ ಎಂದು ಹೇಳಿದ್ದರಿಂದ ಬಡವರೂ ಸಹ ದೇಣಿಗೆ ನೀಡಿದ್ದಾರೆ. ದೇಶದಲ್ಲಿ ಮಾತ್ರವಲ್ಲದೆ ಮಲೇಷ್ಯಾ, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ನಲ್ಲೂ ಜನರಿಗೆ ಶ್ರೀರಾಮನ ಮೇಲೆ ನಂಬಿಕೆಯಿದೆ. ಈಗ ನೀವು ಇದು ರಾಜ್ಯದ ವಿಷಯ ಎಂದು ಹೇಳುತ್ತಿದ್ದೀರಿ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರವನ್ನು ಉದ್ಘಾಟಿಸಿದರು. ಅವರು ಯಾವುದೇ ಒಂದು ರಾಜ್ಯದ ಪ್ರಧಾನಿಯಲ್ಲ. ಬದಲಿಗೆ ಇಡೀ ದೇಶದ ಪ್ರಧಾನಿ. ದೇಶದ ನಾನಾ ಭಾಗಗಳಿಂದ ಜನರು ಉದ್ಘಾಟನೆಗೆ ಬಂದಿದ್ದರು. ಈಗ ಇದು ರಾಜ್ಯದ ವಿಷಯ ಎಂದು ಹೇಳುತ್ತಿದ್ದಾರೆ ಮತ್ತು ಸಂಸತ್ತಿನಲ್ಲಿಉತ್ತರಿಸುವುದಿಲ್ಲ ಎನ್ನುತ್ತಾರೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಸಂಸತ್ತಿನ ಗದ್ದಲಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇದಕ್ಕೆ ಯಾರು ಹೊಣೆ ಎಂದು ನೀವು ಭಾವಿಸುತ್ತೀರಿ? ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿ, ಅವರ ಮೇಲೆ ಪೆಲೆಟ್ ಗನ್ ಪ್ರಯೋಗಿಸಿ, ಬಿಹಾರದಲ್ಲಿ ಎಕೆ-47 ಬಳಸಿದಾಗ ಗೃಹ ಸಚಿವ ಅಮಿತ್ ಶಾ ಜನರಿಗೆ ಉತ್ತರಿಸಲು ಬದ್ಧರಲ್ಲವೇ? ಮಾಧ್ಯಮಗಳು ಸುಮ್ಮನೆ ಇರುವಂತೆ ನಾವು ಸುಮ್ಮನೆ ಕುಳಿತುಕೊಳ್ಳಬೇಕೇ?” ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.





