ಜನಪ್ರತಿನಿಧಿಯೋ ಅಥವಾ ಗೂಂಡಾನೋ?- ಯಶ್ಪಾಲ್ ಸುವರ್ಣ ವಿರುದ್ಧ ಎಸ್‌ಡಿಪಿಐ ವಾಗ್ದಾಳಿ
ಉಡುಪಿ: ನಿನ್ನೆ ಉಡುಪಿಯಲ್ಲಿ CJP ವಿರುದ್ಧ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಷ್ಪಾಲ್ ಸುವರ್ಣ ಅವರು ಮಾಡಿದ ಭಾಷಣವು ಅತ್ಯಂತ ಬೇಜವಾಬ್ದಾರಿಯುತ, ಬೆದರಿಕೆ ಧಾಟಿಯ ಹಾಗೂ ಗೂಂಡಾ ಮನಸ್ಥಿತಿಯನ್ನು ಪ್ರತಿಬಿಂಬಿಸುವ ರೀತಿಯದ್ದಾಗಿದೆ ಎಂದು ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ತಮ್ಮ ಮಾತುಗಳಲ್ಲಿ ಸಂಯಮ ಹಾಗೂ ಜವಾಬ್ದಾರಿಯನ್ನು ಪಾಲಿಸಬೇಕಾಗುತ್ತದೆ. ಆದರೆ ಶಾಸಕ ಯಷ್ಪಾಲ್ ಸುವರ್ಣ ಅವರು ಪದೇಪದೇ ವಿವಾದಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಾಗೂ ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಡುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಆದರೆ ಸರ್ಕಾರದ ವಿರುದ್ಧ ನಡೆದ ಪ್ರಜಾಸತ್ತಾತ್ಮಕ ಪ್ರತಿಭಟನೆಗೆ ಪ್ರತಿಕ್ರಿಯೆಯಾಗಿ ಬೆದರಿಕೆ, ವೈಯಕ್ತಿಕ ನಿಂದನೆ ಅಥವಾ ಹಿಂಸೆಯ ಸಂದೇಶವನ್ನು ನೀಡುವ ರೀತಿಯ ಹೇಳಿಕೆಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಇಂತಹ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಹಾಗೂ ಉದ್ವಿಗ್ನತೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಆದಿ ಉಡುಪಿ ಹಾಜಬ್ಬ-ಹಸನಬ್ಬ ಬೆತ್ತಲೆ ಪ್ರಕರಣದ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದ ಶಾಸಕರು, ಇಂತಹ ಅನಾಗರಿಕ ಹಾಗೂ ಗೂಂಡಾ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೇಳಿಕೆಗಳಿಂದಲೇ ಪದೇಪದೇ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೆ, ಇಂತಹ ವರ್ತನೆಯ ಹಿನ್ನೆಲೆಯಲ್ಲಿ ಅವರು ಕಳೆದ ವರ್ಷ ವಿಧಾನಸಭೆಯಿಂದ 6 ತಿಂಗಳ ಅವಧಿಗೆ ಅಮಾನತು ಶಿಕ್ಷೆಗೆ ಗುರಿಯಾಗಿದ್ದನ್ನು ಸ್ಮರಿಸಬಹುದು ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕನ ವಂಶವನ್ನೇ ಧ್ವಂಸ ಮಾಡುತ್ತೇವೆ ಎಂಬ ಆಕ್ಷೇಪಾರ್ಹ ಹಾಗೂ ಬೆದರಿಕೆ ಧಾಟಿಯ ಭಾಷೆಯನ್ನು ಬಳಸಿರುವುದು ಕಾನೂನಿನ ಮೇಲಿನ ಗೌರವದ ಕೊರತೆಯನ್ನು ತೋರಿಸುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ಈ ಹೇಳಿಕೆಗಳ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶಾಸಕರು ಒಂದು ವಿಷಯವನ್ನು ಮನಗಾಣಬೇಕು, ಬೆದರಿಕೆ ಮತ್ತು ಪ್ರಚೋದನೆಯ ರಾಜಕಾರಣದಿಂದ ಜನರನ್ನು ಮೌನಗೊಳಿಸಲು ಸಾಧ್ಯವಿಲ್ಲ. ಇಂದಿನ ಯುವ ಸಮುದಾಯವು ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಕಾನೂನಿನ ಮೇಲೆ ನಂಬಿಕೆ ಇಟ್ಟಿದ್ದು, ಇಂತಹ ಹೇಳಿಕೆಗಳಿಗೆ ಹೆದರುವುದಿಲ್ಲ. ಆದ್ದರಿಂದ ಶಾಸಕರು ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ಜವಾಬ್ದಾರಿಯುತವಾಗಿ ಮಾತನಾಡುವುದು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಒಳಿತಾಗುತ್ತದೆ ಎಂದು ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಿಫ್ ಕೋಟೇಶ್ವರ ಜಿಲ್ಲಾಧ್ಯಕ್ಷರುಎಸ್‌ಡಿಪಿಐ, ಉಡುಪಿ ಜಿಲ್ಲೆ





