ಸಂಸತ್‌ ಚಲೋ ಪ್ರತಿಭಟನಾ ರ‍್ಯಾಲಿ ವೇಳೆ ಲಾಠಿಚಾರ್ಜ್‌, ಅಶ್ರುವಾಯು ಪ್ರಯೋಗ- ಅಭಿಜಿತ್‌ ದೀಪ್ಕೆ ಪೊಲೀಸರ ವಶಕ್ಕೆ

ನವದೆಹಲಿ, ಜು. 20: ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಸಂಸತ್‌ ಚಲೋ ಪ್ರತಿಭಟನಾ ರ‍್ಯಾಲಿ ವೇಳೆ ಭಾರೀ ಉದ್ವಿಗ್ನತೆ ಉಂಟಾಗಿದ್ದು, ಪಕ್ಷದ ಸಂಸ್ಥಾಪಕ ಅಭಿಜಿತ್‌ ದೀಪ್ಕೆಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಸತ್ ಮುತ್ತಿಗೆಗೆ ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ ಸದಸ್ಯರ ಮೇಲೆ ಪೊಲೀಸರು ಲಾಠಿಚಾರ್ಜ್‌ ಮಾಡಿದ್ದಾರೆ. ಅಲ್ಲದೇ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ ದೆಹಲಿಯಲ್ಲಿ ಭಾರೀ ಉದ್ವಿಗ್ನತೆ ಉಂಟಾಗಿದೆ. ಲಾಠಿಚಾರ್ಜ್‌ ಬೆನ್ನಲ್ಲೇ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಂಡಿದೆ.

ಸಂಸತ್ತಿನ ಮಳೆಗಾಲದ ಅಧಿವೇಶನದ ಸಮಯದಲ್ಲಿ ಭಾರೀ ಭದ್ರತೆಯ ನಡುವೆಯೂ ಪ್ರತಿಭಟನಾಕಾರರು ʻಸಂಸತ್‌ ಚಲೋʼ ರ‍್ಯಾಲಿ ನಡೆಸಿದ್ದರು. ಬ್ಯಾರಿಕೇಡ್‌ಗಳನ್ನು ದಾಟಿ ಸಂಸತ್ತಿನ ಕಡೆಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ್ದರು. ಈ ವೇಳೆ ಪೊಲೀಸರು ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ಸಂಸತ್ತಿನ ಅಧಿವೇಶನ ಆರಂಭವಾಗುತ್ತಿರುವುದರಿಂದ ದೆಹಲಿ ನಗರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ (BNSS) ಸೆಕ್ಷನ್ 163 (ಹಳೆಯ 144ನೇ ವಿಧಿ) ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಈ ಮೆರವಣಿಗೆಗೆ ಯಾವುದೇ ಅಧಿಕೃತ ಅನುಮತಿ ನೀಡಿರಲಿಲ್ಲ ಮತ್ತು ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಪೊಲೀಸರು ಮುಂಚಿತವಾಗಿಯೇ ಎಚ್ಚರಿಸಿದ್ದರು. ನೀಟ್‌- 2026 ರ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು, ವಿರೋಧ ಪಕ್ಷದ ನಾಯಕರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಒತ್ತಾಯಿಸಿ ಕಾಕ್ರೋಚ್ ಜನತಾ​ ಪಾರ್ಟಿ(ಸಿಜೆಪಿ) ಹಾಗೂ ಶಿಕ್ಷಣತಜ್ಞ ಮತ್ತು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚೂಕ್‌ ಅವರ ನಡೆಸುತ್ತಿರುವ “ಸಂಸತ್ ಚಲೋ” ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, ಕೊನೆಗೂ ಶಿಕ್ಷಣ ಸಚಿವರ ರಾಜೀನಾಮೆ ಪಡೆಯಲು ಮುಂದಾಗಿದೆ.

ನೀಟ್ (NEET) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ, ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ದೇಶದ ಪರೀಕ್ಷಾ ವ್ಯವಸ್ಥೆಗೆ ಸಂಬಂಧಿಸಿದ ತೀವ್ರ ಕಳವಳಗಳ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರದಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸತ್ ಚಲೋ ಮೆರವಣಿಗೆ ಆರಂಭಿಸಿದೆ.

ಈ ಪ್ರತಿಭಟನೆಗೆ ದೆಹಲಿ ಪೊಲೀಸರ ಅನುಮತಿ ಇರದ ಕಾರಣ ಕೆಲ ಕಡೆಗಳಲ್ಲಿ ಲಾಠಿ ಚಾರ್ಜ್​ ಕೂಡ ಆಗಿದೆ ಎಂದು ವರದಿಯಾಗಿದೆ. ಅಲ್ಲದೆ, ಜಂತರ್ ಮಂತರ್ ಬಳಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ ಸಹ ಮಾಡಲಾಗಿದೆ. ಆದರೆ ಈಗ ಈ ಪ್ರತಿಭಟನೆಯನ್ನು ಗಂಭೀರಾವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಈ ಕಾಕ್ರೋಚ್​ ಜನತಾ ಪಾರ್ಟಿಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಅಮಿತ್ ಶಾ – ಧರ್ಮೇಂದ್ರ ಪ್ರಧಾನ್ ಭೇಟಿ

ಸಿಜೆಪಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚತ್ತು ಕೊಂಡ ಕೇಂದ್ರ ಸರ್ಕಾರ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಗೃಹ ಸಚಿವ ಅಮಿತ್ ಶಾ ಅವರು, ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

CJP ಜೊತೆ ಜೆ.ಪಿ. ನಡ್ಡಾ ಮಾತುಕತೆ

ಜಂತರ್ ಮಂತರ್‌ನಿಂದ ಸಂಸತ್ ಚಲೋ ನಡೆಯುತ್ತಿರುವ ಮಧ್ಯೆಯೇ ಸರ್ಕಾರ ತಮ್ಮನ್ನು ಸಂಪರ್ಕಿಸಿದೆ ಮತ್ತು ತಾವು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ಕಾಕ್ರೋಚ್ ಜನತಾ ಪಕ್ಷ ಸೋಮವಾರ ಹೇಳಿಕೊಂಡಿದೆ.

“ಈಗ ಕಾಕ್ರೋಚ್ ಜನತಾ ಪಕ್ಷದ ಪರವಾಗಿ ನಾನು ಮತ್ತು ಅಶುತೋಷ್ ರಾಂಕಾ, ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲು ಹೊರಟಿದ್ದೇವೆ. ಸರ್ಕಾರ ಬೆಳಗ್ಗೆ ಮಾತುಕತೆಗಾಗಿ ನಮ್ಮನ್ನು ಸಂಪರ್ಕಿಸಿತ್ತು. ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ. ಯುವಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ನಾವು ಗೆಲ್ಲುತ್ತೇವೆ” ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!