ಉಡುಪಿ: ರಸ್ತೆಯಲ್ಲೇ ಬಿದ್ದ ಮರದ ಕೊಂಬೆಗಳನ್ನು ವಾರದ ಬಳಿಕ ತೆರವುಗೊಳಿಸಿದ ನಗರ ಸಭೆ
ಉಡುಪಿ: “ಉಡುಪಿ ಟೈಮ್ಸ್”ನಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಸ್ತೆ ಮಧ್ಯದಲ್ಲಿ ಬಿದ್ದಿದ್ದ ಮರದ ದಿಮ್ಮಿ ಮತ್ತು ಕೊಂಬೆಗಳನ್ನು ತೆರವುಗೊಳಿಸಿದರು. ಇದರಿಂದ ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಉಂಟಾಗಿದ್ದ ತೊಂದರೆ ನಿವಾರಣೆಯಾಗಿದೆ.

ಕಳೆದ ಭಾನುವಾರ ರಸ್ತೆ ಬದಿಯ ಮರದ ಕೊಂಬೆಗಳನ್ನು ಕಡಿದು ಪಾದಚಾರಿ ಮಾರ್ಗದಲ್ಲೇ ಐದು ದಿನ ಇದ್ದ ಬಗ್ಗೆ ಗುರುವಾರ “ಉಡುಪಿ ಟೈಮ್ಸ್” ವರದಿ ಮಾಡಿತ್ತು. ಇದರಿಂದಾಗಿ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ನಡೆದಾಡಲು ತುಂಬಾ ತೊಂದರೆ ಆಗುತ್ತಿದ್ದ ಬಗ್ಗೆ ಸ್ಥಳೀಯರು ದೂರಿದ್ದರು.

ಸಾರ್ವಜನಿಕರ ಸಮಸ್ಯೆಯನ್ನು ತ್ವರಿತವಾಗಿ ಗಮನಕ್ಕೆ ತಂದು, ಅಧಿಕಾರಿಗಳಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಮಾಡಿದ “ಉಡುಪಿ ಟೈಮ್ಸ್” ವರದಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





