ವಿಧಾನ ಪರಿಷತ್ ನಲ್ಲಿ ಗೂಂಡಾಗಿರಿ ಕಾಂಗ್ರೆಸ್ ಅಧಪತನಕ್ಕೆ ನಾಂದಿ : ಕುಯಿಲಾಡಿ
ಉಡುಪಿ : ಗೂಂಡಾ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ರಾಜ್ಯ ವಿಧಾನ ಪರಿಷತ್ ನಲ್ಲಿ ಗೌರವಾನ್ವಿತ ಉಪ ಸಭಾಪತಿಯವರನ್ನು ಪೀಠದಿಂದ ಎಳೆದಾಡಿದ ಫಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಕಾಂಗ್ರೆಸ್ ನಾಯಕರ ವ್ಯಕ್ತಿತ್ವವನ್ನು ಬಿಂಬಿಸುವ ಇಂತಹ ಅನಾಗರಿಕ ಗೂಂಡಾಗಿರಿ ವರ್ತನೆ ಕಾಂಗ್ರೆಸ್ ಅಧಪತನಕ್ಕೆ ನಾಂದಿ ಹಾಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿಯುತ್ತಿದ್ದ ಕಾಂಗ್ರೆಸ್ ನಾಯಕರು ಸ್ವತಃ ಮೇಲ್ಮನೆ ಉಪ ಸಭಾಪತಿಯ ಸಾಂವಿಧಾನಿಕ ಹುದ್ದೆಗೆ ಅಪಮಾನಗೈದಿದ್ದಾರೆ. ಕಾಂಗ್ರೆಸಿನ ವಿಧಾನ ಪರಿಷತ್ ಸದಸ್ಯರ ಇಂತಹ ಕೀಳು ಮನಸ್ಥಿತಿಯ ಹೇಯ ವರ್ತನೆ ಸಹಿಸಲಸಾಧ್ಯ. ಸರಕಾರ ತಕ್ಷಣ ತಪ್ಪಿತಸ್ಥರ ಮೇಲೆ ಕಾನೂನು ರೀತ್ಯಾ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಸದಾ ದೇಶ ವಿರೋಧಿ ನೀತಿ ಮತ್ತು ಅಪಪ್ರಚಾರವನ್ನೇ ಬಂಡವಾಳವನ್ನಾಗಿಸಿರುವ ಕಾಂಗ್ರೆಸ್ ದಿನೇದಿನೇ ದೇಶಾದ್ಯಂತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ವಾಸ್ತವ. ದೇಶದ ಮುಂದೆ ರಾಜ್ಯದ ಮಾನ ಹರಾಜು ಹಾಕಿರುವ ಕಾಂಗ್ರೆಸ್ ನ ಗೂಂಡಾಗಿರಿ ವರ್ತನೆಗೆ ರಾಜ್ಯದ ಜನತೆ ಮುಂಬರಲಿರುವ ಗ್ರಾಮ ಪಂಚಾಯತ್ ಸಹಿತ ಎಲ್ಲಾ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಹೇಳಿದ್ದಾರೆ.